ಮೆಟ್ರಿಕ್ ಕ್ರಮ ಜಾರಿಯಲ್ಲಿ ಬರುವ ಮೊದಲು ಕೊಡುಕೊಳ್ಳುವ ವ್ಯವಹಾರ ಮತ್ತು ಆಡಳಿತ ವ್ಯವಹಾರದಲ್ಲಿ ಪಾರಂಪರಿಕ ಮಾಪಕ ಪದ್ಧತಿ ಬಳಕೆಯಲ್ಲಿತ್ತು. ಅಧಿಕೃತವಾಗಿ ೧೯೫೮ರಲ್ಲಿ ಭಾರತದಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂದಿದೆ. ಈ ಮೆಟ್ರಿಕ್ ಮಾಪಕ ಪದ್ಧತಿ ಬಳಕೆಗೆ ಬಂದು ನಾಲ್ಕು ದಶಕಗಳು ಉರುಳಿದರೂ ಮನಸ್ಸಿನಿಂದ, ವ್ಯವಹಾರದಿಂದ ಬಿಟ್ಟು ಹೊಗಿಲ್ಲ. ಉತ್ತರ ಕರ್ನಾಟಕ ಗ್ರಾಮೀಣ ಜನರ ಕೊಡುಕೊಳ್ಳುವ ವ್ಯವಹಾರದಲ್ಲಿ ಸೇರು, ಪಾವಿನ ಅಳತೆ ಪದ್ಧತಿ ಅಳಿವಿನಲ್ಲೂ ಉಳಿದಿದೆ. ಹಳ್ಳಿಯಲ್ಲಿ ಬೆಳೆದ ತರಕಾರಿಯನ್ನು ಬೆಳಗಾವಿ ನಗರದಲ್ಲಿ ಮಾರಾಟ ಮಾಡುವ ಹಳ್ಳಿಗರು ತಕ್ಕಡಿ ಮತ್ತು ಅಳತೆ ಕಲ್ಲಿನೊಂದಿಗೆ ಇಂದಿಗೂ ಸೇರು, ಪಾವಿನ ಮಾಪಕಗಳನ್ನು ತಮ್ಮೊಂದಿಗೆ ತರುತ್ತಾರೆ. ಬೆಳ್ಳುಳ್ಳಿ, ಮೊಳಕೆ ಕಾಳುಗಳು, ಜವಾರಿ ಅಕ್ಕಿ, ಅವರೆ ಬೀಜ, ಧಾನ್ಯಗಳನ್ನು ಮಾರಾಟ ಮಾಡುವುದು ಪಾವು, ಸೇರಿನ ಲೆಕ್ಕದಲ್ಲಿಯೆ. ಹೊಸ ತಲೆಮಾರಿನವರು ತಕ್ಕಡಿಯಲ್ಲಿ ಧಾನ್ಯ, ಕೆಲವು ತರಕಾರಿಗಳನ್ನು ತೂಗಿ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಇಳಿವಯಸ್ಸಿನವರು, ವೃದ್ಧರು ಸೇರು, ಪಾವಿನ ಲೆಕ್ಕಕ್ಕೆ ಅಂಟಿಕೊಂಡಿದ್ದಾರೆ. ಅವರಿಗೆ ಇನ್ನೂ ಈ ನಾಟಿ ಅಳತೆಯೇ ವ್ಯವಹಾರಿಕ ಮಾಪಕ.
ವ್ಯವಹಾರ, ವಸ್ತು ವಿನಿಮಯದಲ್ಲಿ ಅಳತೆ ಅಥವಾ ಮಾಪಕ ಪ್ರಧಾನ. ಘನ ವಸ್ತುಗಳು ಕೆ. ಜಿ. ಲೆಕ್ಕದಲ್ಲಿ ದ್ರವ ಪದಾರ್ಥಗಳನ್ನು ಲೀಟರ್ ಅಳತೆಯಲ್ಲಿ ಇಂದು ವಿನಿಮಯ ಅಥವಾ ವ್ಯವಹಾರ ಮಾಡಲಾಗುತ್ತದೆ. ಇದು ಮೆಟ್ರಿಕ್ ಪದ್ದತಿ. ನಮ್ಮ ಮಾಪಕ ಪದ್ಧತಿ ಬೇರೆಯದೇ ಆಗಿತ್ತು. ಮೆಟ್ರಿಕ್ ಪದ್ಧತಿಯನ್ನು ತೂಕ ಮತ್ತು ಅಳತೆ ಕಾನೂನಿನ ಅಡಿಯಲ್ಲಿ ೧೯೫೮ರಲ್ಲಿ ತರಲಾಗಿದೆ. ೧೯೬೦ರಿಂದ ದೇಶದಾದ್ಯಂತ ಏಕರೂಪದ ಮಾಪಕ ಪದ್ಧತಿ ಜಾರಿಯಾಗಿದೆ. ಹಾಗಾದರೆ ಅದಕ್ಕೂ ಮೊದಲು ನಮ್ಮಲ್ಲಿ ಹೇಗೆ ವಸ್ತು ವಿನಿಮಯ ನಡೆಯುತ್ತಿತ್ತು?
ಕೃಷಿ ಉತ್ಪಾದನೆ, ಬಳಕೆಯ ವಸ್ತುವನ್ನಾಧರಿಸಿ ವಿವಿಧ ಮಾಪಕ ಪದ್ಧತಿ ನಮ್ಮಲ್ಲಿ ಚಾಲ್ತಿಯಲ್ಲಿತ್ತು. ಅದು ದೇಸೀಯ ಮಾಪಕ ಕ್ರಮ. ಇಂದು ಅದು ಪಾರಂಪರಿಕ ಕ್ರಮ. ಈ ಅಳತೆಯೊಂದಿಗೆ ಜನ ಜೀವನದ ವಿವಿಧ ಸಂಬಂಧ, ರೂಢಿ, ಸಂಪ್ರದಾಯವೂ ಥಳಕು ಹಾಕಿಕೊಂಡಿತ್ತು. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ತೋರುವ ಈ ಮಾಪಕ ಕ್ರಮ ಇಂದು ನಮ್ಮಿಂದ ದೂರವಾಗಿದೆ.
ಪಾರಂಪರಿಕ ಅಳತೆ ಸಾಧನಗಳಲ್ಲಿ ಸಿದ್ದೆ, ಪಾಯಲಿ, ಪಾವು, ಕೊಳಗದ ವಿಧಾನವೂ ಒಂದು. ಈ ಅಳತೆ ಪ್ರಮಾಣ ಎಲ್ಲ ಪ್ರದೇಶಗಳಲ್ಲಿಯೂ ಒಂದೇ ತರವಾಗಿರಲಿಲ್ಲ. ಉತ್ತರ ಕನ್ನಡದಲ್ಲಿ ಒಂದು ವಿಧಾನ ಇದ್ದರೆ ದಕ್ಷಿಣ ಕನ್ನಡದ ಮಾಪಕ ಕ್ರಮವೇ ಬೇರೆ. ಉತ್ತರ ಕರ್ನಾಟಕದಲ್ಲಿದ್ದ ಅಳತೆ ವಿಧಾನವೇ ಇನ್ನೊಂದು. ಮೊಹೆಂಜೋದಾರೋ ನಾಗರಿಕತೆಯ ಕಾಲದಲ್ಲಿ ಒಂಬತ್ತು ಭಾಗಗಳ ಚಿಪ್ಪಿನ ಅಳತೆಗೋಲು, ಮತ್ತು ಹರಪ್ಪ ನಾಗರಿಕತೆಯ ಕಾಲದಲ್ಲಿ ತೂಕದ ಬೊಟ್ಟುಗಳು ಬಳಕೆಯಲ್ಲಿದ್ದವು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ನಾಗರಿಕತೆಯೊಂದಿಗೆ ಅಳತೆಯ ಸಾಧನ, ವಿಧಾನಗಳೂ ಸುಧಾರಣೆಯೊಂದಿಗೆ ವಿಕಾಸವಾಯಿತು. ಈ ಮಾಪಕ ಪದ್ಧತಿ ಪ್ರಾದೇಶಿಕ ಭಿನ್ನತೆ, ವೈವಿಧ್ಯತೆಯನ್ನೂ ಪ್ರತಿಬಿಂಬಿಸುತ್ತದೆ. ವಿಜಯ ನಗರ ಅರಸರ ಕಾಲದಲ್ಲಿ ಬೀದಿ ಬದಿಗಳಲ್ಲಿ ವಜ್ರ ವೈಡೂರ್‍ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರೆಂಬ ಚರಿತ್ರೆಯ ಮಾತು ನಮ್ಮ ಅಂದಿನ ಮಾಪಕ ಪದ್ಧತಿಯನ್ನು ಪ್ರತಿನಿಧಿಸುತ್ತದೆ.
ಸಿದ್ದೆ: ಕಟ್ಟಿಗೆಯಿಂದ ತಯಾರಿಸಿದ ಒಂದು ಚಿಕ್ಕ ಅಳತೆಯ ಸಾಧನ. ಸಿದ್ದೆ- ಕೊಳಗ ಮಾಪಕದಲ್ಲಿ ಸಿದ್ದೆ ಚಿಕ್ಕ ಅಳತೆಯ ಮಾಪಕ. ಬಿದಿರಿನಿಂದ ತಯಾರಿಸಿದ ಸಿದ್ದೆಯ ಬಳಕೆಯೂ ಇತ್ತು. ‘ಸಿದ್ದೆ ಅಕ್ಕಿ ಕೊಡಮ್ಮಾ’ ಎಂದು ಭಿಕ್ಷುಕರು ಹೇಳುವುದನ್ನು ಕೇಳಿರಬಹುದು. ಸಾಮಾನ್ಯವಾಗಿ ಸಿದ್ದೆಯಲ್ಲಿ ಅಕ್ಕಿ, ಕಾಳುಕಡಿಯನ್ನು ಅಳೆಯುತ್ತಿದ್ದರು. ಒಂದು ಸಿದ್ದೆ ಅಕ್ಕಿ ಈರ್ವರ ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ. ಮಲೆನಾಡಿನಲ್ಲಿ ಊಟಕ್ಕೆ ಅನ್ನ ಮಾಡಲು ಬೇಕಾದ ಅಕ್ಕಿಯನ್ನು ಸಿದ್ದೆಯಲ್ಲಿ ಅಳೆದು ಹಾಕುವ ಪದ್ಧತಿ ರೂಢಿಯಲ್ಲಿತ್ತು.
ನಾಲ್ಕು ಸಿದ್ದೆಗೆ ಪಾವು: ಸಿದ್ದೆಯ ನಂತರದ ಅಳತೆ ಪಾವು. ನಾಲ್ಕು ಸಿದ್ದೆಗೆ ಒಂದು ಪಾವು. ತಾಮ್ರ, ಹಿತ್ತಾಳೆಯಿಂದ ಪಾವಿನ ಅಳತೆ ಮಾಪಕವನ್ನು ಮಾಡುತ್ತಾರೆ.
ಸಿದ್ದೆಯ ನಂತರದ ಮಾಪಕ ಪಾಯಲಿ. ಒಂದು ಪಾಯಲಿ ಎಂದರೆ ೪ ಪಾವು.
ಸಿದ್ದೆ, ಪಾವು, ಪಾಯಲಿ ಇವು ಒಂದು ರೀತಿಯಲ್ಲಿ ಚಿಲ್ಲರೆ ಲೆಕ್ಕ. ಈ ಮಾಪಕಗಳನ್ನು ಬೇಳೆ ಕಾಳು, ಧಾನ್ಯಗಳನ್ನು ಅಳೆಯಲು ಬಳಸುತ್ತಿದ್ದರು. ಕೊಡಕೊಳ್ಳುವ ವ್ಯವಹಾರದಲ್ಲಿ ಇವುಗಳೇ ಅಳತೆಯ ಸಾಧನಗಳು. ಹೆಚ್ಚಿನ ಪ್ರಮಾಣದಲ್ಲಿರುವ ವಸ್ತುಗಳನ್ನು ಅಳೆಯಲು, ವಿನಿಮಯ ಮಾಡಿಕೊಳ್ಳಲು ಕೊಳಗದ ಬಳಕೆಯಾಗುತ್ತಿತ್ತು. ಆದರೆ ಕೊಳಗದ ಅಳತೆಯಲ್ಲೂ ಪ್ರಾದೇಶಿಕ ವ್ಯತ್ಯಾಸ ಕಂಡು ಬರುತ್ತದೆ. ಉತ್ತರ ಕರ್ನಾಟಕ ಕೆಲವು ಭಾಗದಲ್ಲಿ ಕೊಳಗದ ಅಳತೆ ಬದಲಿಗೆ ಬಳ್ಳದ ಪದ್ಧತಿ ಇತ್ತು. ಅಲ್ಲಿಯ ಅಳತೆ ಕ್ರಮ ಬೇರೆಯದೇ ಆಗಿತ್ತು. ಅದು ಹೀಗಿತ್ತು. ೨ನವಟಾಕು- ೧ಚಟಾಕು(ಪಾವು), ೨ ಚಟಾಕು- ೧ ಸೇರು, ೨ ಸೇರು- ಕಾಲು ಪಾವು, ೨ ಪಡಿ- ೧ಗಿದ್ನ ಹೀಗೆ ಸುಮಾರು ೯ ವಿಭಾಗದಲ್ಲಿ ಕೃಷಿ ಉತ್ಪನ್ನಗಳನ್ನು ಅಳೆಯುವ ಕ್ರಮ ಬಳಕೆಯಲ್ಲಿತ್ತು.
ಹೈದ್ರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ, ಹೈದ್ರಾಬಾದ್ ಗುಲ್ಬರ್ಗಾ ಪ್ರದೇಶದಲ್ಲಿ ಕಚೇರಿ ಅಳತೆ, ಬಝಾರ್ ಅಳತೆಯೆಂದು ಪ್ರತ್ಯೇಕ ಅಳತೆಯಿದ್ದ ಬಗ್ಗೆ ಮಾಹಿತಿಗಳು ದೊರೆಯುತ್ತದೆ. ಇಲ್ಲಿ ಸಿಕ್ಕ, ಕಂಚಾಸ್, ಪುಂಕಾಸ್, ರತೀಸ್, ಮಾಶಾಸ್ ಇನ್ನಿತರ ಮಾಪಕ ಕ್ರಮ ಬಳಕೆಯಲ್ಲಿತ್ತು.
೧೯೭೦ರಲ್ಲಿ ಮೈಸೂರು ರಾಜ್ಯ ಸರ್ಕಾರ ಪ್ರಕಟಿಸಿದ ಕರ್ನಾಟಕ ಪರಂಪರೆ ಪುಸ್ತಕದಲ್ಲಿ ಈ ಪದ್ಧತಿಯ ಕೆಲವು ಮಾಹಿತಿಗಳು ಲಭ್ಯ. ಅಲ್ಲಿರುವಂತೆ: ಬಾದಾಮಿ ಚಾಲುಕ್ಯರ ಕಾಲದಲ್ಲಿ ದೊರೆತ ಕ್ರಿ. ಶ. ೭೩೨-೩ರ ಶಾಸನದಲ್ಲಿ ಮಣ, ಸೇರು, ವೀಶ, ಭಾಂಡಪೇರು ಬಗ್ಗೆ ಉಲ್ಲೇಖವಿದೆ. ಇವುಗಳಲ್ಲಿ ಮಣ ೧೧. ೨ ಕೆ. ಜಿ., ಪೇರು ಎಂಬುದು ೬೪ ಸೇರಿನ ಒಂದು ಕಾಳಿನ ಮೂಟೆಗೆ ಸಮ, ಮೀಸ, ಮೀಶ ಎಂಬುದು ದಕ್ಷಿಣ ಕರ್ನಾಟದಲ್ಲಿ ಪ್ರಚಲಿತವಿತ್ತು. ಭಾಂಡಪೇರು ಎಂಬುದು ಒಂದು ಭಂಡಿಯ ಭಾರದಳತೆ. ಕರ್ನಾಟಕ ಸರ್ಕಾರ ಪ್ರಕಟಿಸಿದ ಕರ್ನಾಟಕ ಪರಂಪರೆ ಪುಸ್ತಕದಲ್ಲಿ ೭೫ ಸೇರು ಭತ್ತದ ಬೆಲೆ ೧೯೩೦ರಲ್ಲಿ ೧ ರುಪಾಯಿ ಇತ್ತು. ೧೯೬೦ರಲ್ಲಿ ಒಂದು ರುಪಾಯಿಗೆ ೧೦. ೫ ಸೇರು ಭತ್ತ ಬರುತ್ತಿತ್ತು ಎಂದು ನಮೂದಿಸಲಾಗಿದೆ.
ಈ ಪಾರಂಪರಿಕ ಅಳತೆ ಸಾಧನಗಳು ಜನರ ಜೀವನದಲ್ಲಿ ಬಳಕೆಯಲ್ಲಿದ್ದ ಬಗೆ ವಿಶಿಷ್ಟ. ಕೃಷಿಕರ ಮನೆಯಲ್ಲಿ ಕೂಲಿ ಮಾಡಿದರೆ ಅವನಿಗೆ ಎರಡುವರೆ ಪಾಯಲಿ ಅಕ್ಕಿಯನ್ನು, ೫ರಿಂದ ೧೦ ರುಪಾಯಿಯನ್ನು ಕೂಲಿಯಾಗಿ ಕೊಡಲಾಗುತ್ತಿತ್ತು. ಇದಕ್ಕೆ ‘ಬಳಿ’ಕೊಡುವ ಪದ್ಧತಿ ಎಂದು ಕರೆಯುತ್ತಾರೆ. ಶಿರಸಿ ತಾಲೂಕಿನ ಸೋಂದಾ ಪ್ರದೇಶದಲ್ಲಿ ಇತ್ತೀಚಿನ ವರೆಗೂ ಚಾಲ್ತಿಯಲ್ಲಿದ್ದ ಪದ್ದತಿ ಇದು. ಗದ್ದೆಗೆ ಬಿತ್ತಲು ಬೇಕಾದ ಭತ್ತವನ್ನು(ಬೀಜ) ಕೊಳಗದ ಅಳತೆಯಲ್ಲಿಯೇ ನಿರ್ಧರಿಸಲಾಗುತ್ತಿತ್ತು. ೨೦ ಕೊಳಗ ಭತ್ತ ಒಂದು ಖಂಡಗ ಭೂಮಿ ಬಿತ್ತನೆಗೆ ಬರುತ್ತದೆ ಎಂಬುದು ಹಿರಿಯರ ಲೆಕ್ಕ. ಒಂದು ಖಂಡಗ ಭೂಮಿ ಎಂದರೆ ೧.೨೫ ಎಕರೆ ಭೂಮಿ ಎಂದು ಆಧುನಿಕ ಲೆಕ್ಕ. ಕರೆವಕ್ಕಲ ಜನಾಂಗದ ಮದುವೆಯ ಶಾಸ್ತ್ರದಲ್ಲಿ ಕೆಂಪು(ಕುಂಕುಮ)ನೀರಿನಲ್ಲಿ ಬಂಗಾರದ ಉಂಗುರವನ್ನು ಹಾಕುತ್ತಾರೆ. ಅದನ್ನು ವರ ಹುಡುಕಿ ತೆಗೆಯುವ ಪದ್ಧತಿ ರೂಢಿಯಲ್ಲಿದೆ. ಆವಾಗ ‘ವಜ್ರ ಕಂಡ್ಯೋ, ವೈಡೂರ್‍ಯ ಕಂಡ್ಯೋ, ೧೨ ಖಂಡುಗ ಹೊಲ ಕಂಡ್ಯೋ’ ಎಂದು ವರನಲ್ಲಿ ಕೇಳಲಾಗುತ್ತದೆ. ೧೨ ಖಂಡುಗ ಹೊಲವನ್ನು ಇಲ್ಲಿ ಪರೋಕ್ಷವಾಗಿ ವಜ್ರ ವೈಡೂರ್‍ಯಕ್ಕೆ ಹೋಲಿಸಿರುವುದನ್ನು ಗಮನಿಸಬಹುದು. ಬುಡಕಟ್ಟು ಜನಾಂಗದ ಹಾಲಕ್ಕಿ ಜನಾಂಗದಲ್ಲಿ ತಿರುಪತಿ ಯಾತ್ರೆಗೆ ಹೋದವರು ಅಲ್ಲಿಂದ ಕೊಳಗವನ್ನು ತರುವ ಪದ್ಧತಿಯಿದೆ. ಚಂದನದ ಕಟ್ಟಿಗೆಯನ್ನು ಮಾಡಿದ ಈ ಕೊಳಗ ಒಡೆದರೆ ಅದನ್ನು ತೇಯ್ದು ದೇವರ ಪೂಜೆಗೆ ಬಳಸುತ್ತಾರೆ. ಸಂಪ್ರದಾಯದಂತೆ ಕೊಳಗವನ್ನು ಸುಡುವುದಾಗಲಿ, ಎಸೆಯುವುದಾಗಲೀ ಮಾಡುವುದಿಲ್ಲ. ಬುಡಕಟ್ಟು ಜನಾಂಗದವರು ಆಚರಿಸುವ ಸುಗ್ಗಿ ಹಬ್ಬ, ಆರ್ದೆ ಮಳೆಹಬ್ಬ, ಹೊಸಕ್ಕಿ ಹಬ್ಬ ಮತ್ತು ದೀಪಾವಳಿ ಹಬ್ಬದಲ್ಲಿ ಸಿದ್ದೆ ಕೊಳಗಗಳನ್ನು ತೊಳೆದು ಪೂಜೆ ಸಲ್ಲಿಸುತ್ತಾರೆ. ಹಲಸು ಮತ್ತಿತರ ಗಟ್ಟಿ ಇರುವ ಮರಗಳಿಂದ ಕೊಳಗ ತಯಾರಿಸುತ್ತಾರೆ. ಕೊಳಗದ ಬಾಯಿ(ತುದಿ) ಒಡೆಯದಂತೆ ತುದಿಯಲ್ಲಿ ಕಬ್ಬಿಣದ ಪಟ್ಟಿಯನ್ನು ಹಾಕುವ ಪದ್ಧತಿಯೂ ಇತ್ತು.
ಸಿದ್ದೆಯ ಅಳತೆ ಕ್ರಮದಲ್ಲಿ ದೊಡ್ಡ ಅಳತೆ ಖಂಡಗ. ಪೂರ್ತಿ ೨೦ ಕೊಳಗಕ್ಕೆ ಒಂದು ಖಂಡಗ. ಇಲ್ಲಿ ಗಮನಿಸಬೇಕಾದ ಸಂಗತಿ, ಭೂಮಿಯನ್ನು ಖಂಡಗದ ಲೆಕ್ಕದಲ್ಲಿ ಅಳೆಯುವುದು ಬೇರೆ, ಭತ್ತವನ್ನು ಖಂಡಗದಲ್ಲಿ ಅಳೆಯುವ ಪದ್ಧತಿ ಬೇರೆ. ಭತ್ತ ಅಳೆಯುವ ಖಂಡಗಕ್ಕೆ ಪ್ರತ್ಯೇಕ ಸಾಧನವಿರಲಿಲ್ಲ. ೨೦ ಕೊಳಗ ಭತ್ತವನ್ನು ಅಳೆದರೆ ಅದನ್ನೇ ಒಂದು ಖಂಡಗ ಎಂದು ಹೇಳುವ ರೂಢಿಯಿತ್ತು. ವಲ್ಲೊ ಎಂಬ ಇನ್ನೊಂದು ವಿಧದ ಮಾಪಕವೂ ಬಳಕೆಯಲ್ಲಿತ್ತು. ಇದು ಕರಾವಳಿ ಮತ್ತು ಕೊಂಕಣಿ ಸಮುದಾಯದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ವಲ್ಲೋ ಬಿದಿರು, ಬೆತ್ತದಿಂದ ತಯಾರಿಸಿದ ಒಂದು ಅಳೆತೆಯ ಸಾಧನ. ಒಂದು ವಲ್ಲೋ ಎಂದರೆ ಐದು ಪಾಯಲಿ. ಅಕ್ಕಿ ಅಳೆಯಲು ಇದರ ಬಳಕೆ.
ದಣಿದ ಎತ್ತಿಗೆ ಮಣವೇ ಭಾರ, ಮಣಾ ತೂಗದ ತ್ರಾಸು ಖಂಡಿ ತೂಗೀತೇ, ಸೇರು ಹೊರದ ತ್ರಾಸು ಭಾರ ಹೋತ್ತೀತೇ, ಕಂಡುಗವನ್ನು ಬಳ್ಳದಲ್ಲಿ ಅಳೆದಂತೆ ಇವು ಪಾರಂಪರಿಕ ಅಳತೆಯನ್ನು ಹೇಳುವ ಗಾದೆಮಾತುಗಳು.
ಬದಲಾದ ಕಾಲದಲ್ಲಿ ಅಳತೆಯ ಕ್ರಮವೂ ಬದಲಾಗಿದೆ. ಏಕ ರೂಪದ ಮಾರುಕಟ್ಟೆ ವ್ಯವಸ್ಥೆಗಾಗಿ ಮೆಟ್ರಿಕ್ ಪದ್ಧತಿ ಬಂದಿದೆ. ದೇಶ ವಿದೇಶವೂ ಸೇರಿದಂತೆ ಎಲ್ಲಡೆ ಕೆ. ಜಿ. ಅಥವಾ ಲೀಟರ್ ಎಂದರೆ ಒಂದೇ ಪ್ರಮಾಣದ ಅಳತೆಯಾಗಿದೆ. ಒಳಿತು ಕೆಡಕು ಎನ್ನುವ ಅಭಿಪ್ರಾಯಕ್ಕಿಂತ ಜಾಗತೀಕರಣ, ವ್ಯಾಪಾರೀಕರಣದಲ್ಲಿ ಪಾರಂಪರಿಕ, ದೇಸೀಯ ಜ್ಞಾನಕ್ಕೆ ಬೆಲೆಯಿಲ್ಲ.
2 comments:
gajagamana..
anno tamashe head line holedittu..
any way welcome to blog world..
keep updating..:-)
Post a Comment