‘ಮುಂಗಾರು ಮಳೆ’ ‘ಚೆಲ್ಲಾಟ’ ಆಡುತ್ತಿದೆ. ಜೂನ್ ತಿಂಗಳು ಕಳೆದರೂ ರಾಜ್ಯದಲ್ಲಿ ಮಳೆರಾಯ ಮಣ್ಣಿಗೆ ತಂಪು ನೀಡಿಲ್ಲ. ಅಲ್ಲಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ, ಕಪ್ಪೆ ಮದುವೆ ಅಲ್ಲದೆ ಮೆರವಣಿಗೆಯೂ ಶುರುವಾಗಿದೆ. ಹಾಗಾದರೆ ನೈಸರ್ಗಿಕವಾಗಿ ಸುರಿಯುವ ಮಳೆಯನ್ನು ಮಾನವ ಯತ್ನದಿಂದ ಧರೆಗಿಳಿಸಲು ಸಾಧ್ಯವೇ? ಮಳೆಗಾಗಿ ವಿಮಾನ ಏರಿ ಮೋಡ ಭಿತ್ತನೆ ಮಾಡಿದರೆ ಸುರಿದೀತೆ ಹನಿ ಹನಿ ಮಳೆ? ಬಿಟ್ಟು ಬಿಡಿ ಇಂಥ ವ್ಯರ್ಥ ಪ್ರಯತ್ನಗಳನ್ನೆಲ್ಲಾ ಹಾಗೆ ಸುಮ್ಮನೆ ಎನ್ನುತ್ತೀರಾ? ಜಾನಪದ, ಧಾರ್ಮಿಕ ಆಚರಣೆಯಲ್ಲಿ ಮತ್ತೆ(ಮೂಢ)ನಂಬಿಕೆಯಿಂದ ಜನ ಮಳೆಗಾಗಿ ಏನೆಲ್ಲ ಮಾಡುತ್ತಾರೆ? ಮಳೆಗೊಂದು ಆಚರಣೆ ಅದೆಷ್ಟು ಫಲಪ್ರದ? ಸುರಿದೀತೆ ಭುವಿಗೆ ಮಳೆ?
ಹಸಿರುಟ್ಟೀತೆ? ಹಸನಾದೀತೆ ಬದುಕು?
ಹಸಿರುಟ್ಟೀತೆ? ಹಸನಾದೀತೆ ಬದುಕು?
‘ಭರಣಿ ಸುರಿದ್ರೆ ಭರಗಾಲ್ದ ಭಯವಿಲ್ಲ’, ‘ಭರಣಿ ಹುಯ್‌ದ್ರೆ ಧರಣಿ ತುಂಬ ಬೆಳೆ’ ಹೀಗೆ ಮೊದಲ ಮಳೆಯ ಕುರಿತು ಬಗೆ ಬಗೆಯ ಗಾದೆ ಮಾತುಗಳಿವೆ. ನಂಬಿಕೆಗಳಿವೆ. ಆ ಮೊದಲ ಮಳೆ ಸುರಿಯದೇ ಇದ್ದಾಗ ರೈತ, ಜನ ಕಂಗೆಡುತ್ತಾರೆ. ಮಳೆಗಾಗಿ ವಿವಿಧ ಆಚರಣೆಗೆ ಮುಂದಾಗುತ್ತಾರೆ.
ಚೈತ್ರ ಮಾಸದಿಂದ ಕಾರ್ತಿಕ ಮಾಸದ ವರೆಗಿನ ಮಳೆ ನಕ್ಷತ್ರಗಳ ಮೇಲೆ ಹೆಚ್ಚು ನಂಬಿಕೆಗಳು, ಆಚರಣೆಗಳು ಕೇಂದ್ರೀಕೃತವಾಗಿದೆ. ಅಶ್ವಿನಿ, ಭರಣಿಯಿಂದ ಮಘಾ ನಕ್ಷತ್ರದ ವರೆಗೆ ಮಳೆ ಸುರಿಯುತ್ತದೆ ಎಂಬ ವಾಡಿಕೆ.
ಇದಕ್ಕೆ ಜನಪದ ಎನ್ನಿ. ಧಾರ್ಮಿಕ ಅಥವಾ ನಂಬಿಕೆ, ಮೂಢ ನಂಬಿಕೆ ಎಂದೇ ಕರೆದುಕೊಳ್ಳಿ. ಮಳೆಗಾಗಿ ರೈತರಲ್ಲಿ, ಬುಡಕಟ್ಟು ಜನಾಂಗದವರಲ್ಲಿ ವೈವಿಧ್ಯಮಯ ಆಚರಣೆ ಇದೆ. ಭಕ್ತಿ, ಕಳಕಳಿ ಇದೆ. ಜೀವಜಲಕ್ಕಾಗಿ ಸಲ್ಲಿಸುವ ಪ್ರಾರ್ಥನೆ, ಆಚರಣೆ ಆಶ್ಚರ್ಯವನ್ನೂ ಹುಟ್ಟಿಸುತ್ತದೆ. ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಗ್ರೀಕ್, ರೋಮನ್ ಕಾಲದಿಂದ ಇಂದಿನ ವರೆಗೂ ಮಳೆಯ ಕುರಿತ ಆಚರಣೆಗಳು ಪ್ರಚಲಿತದಲ್ಲಿದೆ. ಆಫ್ರಿಕಾದ ಬುಡಕಟ್ಟು, ಚೀನಾದ ರೈತರೂ ನಮ್ಮಂತೆ ಇಂದಿಗೂ ಮಳೆಯ ಕುರಿತು ಯಂತೆಂಥದೋ ಆಚರಣೆ ಮಾಡುತ್ತಾರೆ. ಆದರೆ ಧರೆಗೆ ಸುರಿವ ಮಳೆಮಾತ್ರ ತನಗೆ ಯಾವುದೂ ಸಂಬಂಧ ಇಲ್ಲ ಎಂಬಂತೆ ಸುರಿದು ಬಿಡುತ್ತದೆ. ಮೊದಲ ಮಳೆಯೇ ಕೆರೆ ಒಡ್ಡು ಒಡೆಯುವಷ್ಟು, ನಾಲ್ಕಾರು ಜನರ ಸಾವಿಗೆ ಕಾರಣವಾಗುವಷ್ಟು ಸುರಿದು ಬಿಡುತ್ತದೆ. ಮುಂಗಾರು ಚೆನ್ನಾಗಿ ಸುರಿಯಿತೆಂದು ಬೀಜ ಬಿತ್ತಿದರೆ, ಮೊಳಕೆ ಒಣಗಿ, ಜೀವನ ಕಳೆದುಕೊಳ್ಳುವಂತ ಸಂಕೀರ್ಣ ಸ್ಥಿತಿಯೂ ಇಂದಿದೆ. ಆದರೆ ಆಚರಣೆ ಬಿಟ್ಟೀವೆ ನಾವು? ಮಳೆ ಬೇಡವೆಂದು ಕೈಕಟ್ಟಿ ಕುಳಿತಾರೆಯೇ ರೈತರು? ಮಳೆ ದೇವನ ನೆನೆಯದೇ ಕೃಷಿ ಹಸನಾದೀತೆ?
ಬಿಸಿಲು ಮಳೆ, ಮಂಗನ ಮದುವೆ
ಇರುವೆ ದಿಬ್ಬಣ, ಚೋರಟೆ ಚಕ್ಕುಲಿ
ನಂಜುಳೆ ಪಾಯ್ಸ
ಮಳೆಗಾಗಿ ಹೀಗೆ ಹಾಡಿ ಕುಣಿವ ಮಕ್ಕಳಾದಿಯಾಗಿ ಎಲ್ಲರಲ್ಲೂ ಮಳೆಯ ಕುರಿತು ಒಂದೊಂದು ಕಲ್ಪನೆಇದೆ.
ಟಿ ಏನೆಲ್ಲ ಆಚರಣೆಗಳು:ಕದಂಬರ ನಾಡು, ಬನವಾಸಿಯ ಆದಿ ಮಧುಕೇಶ್ವರ ದೇವರ ಪರ್ಜನ್ಯ ಸುತ್ತಮುತ್ತಲಿನ ನಾಡಿಗೆಲ್ಲ ಪರಿಚಿತ. ಇಲ್ಲಿನದು ಭಕ್ತಿ ಪ್ರಧಾನ ಕಾರ್‍ಯ. ಸಂಕಲ್ಪಮಾಡಿ ಮಧುಕೇಶ್ವರ ಲಿಂಗವನ್ನು ಪೂರ್ತಿ ನೀರಲ್ಲಿ ಮುಳುಗಿಸಿ ಮಳೆ- ಬೆಳೆ ಪಡೆಯುವ ಸಂಪ್ರದಾಯ. ಗರ್ಭಗುಡಿಯೊಳಗೆ ವಶಿಷ್ಟ ತೀರ್ಥದ ನೀರು ತುಂಬುತ್ತಾರೆ. ಲಿಂಗ ಮುಳುಗಿ ಮೇಲ್ಬಾಗದಲ್ಲಿ ಕನಿಷ್ಟ ಮೂರು ಇಂಚು ನೀರು ನಿಲ್ಲಿಸುತ್ತಾರೆ. ಬಳಿಕದ ೨೪ ಗಂಟೆಯಲ್ಲಿ ಮಳೆ ಸುರಿಯುತ್ತದೆ. ಈಗ ಎರಡು ವರ್ಷದ ಹಿಂದೆ ಪರ್ಜನ್ಯ ಮಾಡಲಾಗಿತ್ತು.
ಟಿ ನರ್ತನ, ಹಾಡು, ಮದುವೆ :ಮಳೆಗಾಗಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ, ಗೊಂಡ ಜನಾಂಗದವರು ನರ್ತಿಸುತ್ತಾರೆ. ಅದು ತಾರ್ಲೆ ಕುಣಿತ. ಮಳೆಗಾಗಿ ಹಾರೈಸುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ಹೊಲದಲ್ಲಿ ಮಳೆಗಾಗಿ ನರ್ತಿಸುತ್ತಾರೆ. ಬೆದ್ರಂಡೆ ಹೊನ್ನಾವರ ಭಾಗದ ಆಚರಣೆ. ಹೊಲದಲ್ಲೇ ನರ್ತಿಸುತ್ತಾರೆ. ಬಳಿಕ ಸಾಂಕೇತಿಕವಾಗಿ ಮದುವೆ ಮಾಡುತ್ತಾರೆ. ತಾರ್ಲೆ ಮತ್ತು ಬೆದ್ರಂಡೆ ಕುಣಿತಕ್ಕೆ ಪಧ್ಯಗಳೂ ಇವೆ. ಲಂಬಾಣಿ ಜನಾಂಗದವರು ಮಳೆರಾಜನ ಕುಣಿತ ಮಳೆಗಾಗಿಯೇ ಇದೆ. ಈ ಹಾಡು ಹಾಡಿ ಕುಣಿದರೆ ಮಳೆಯಾಗುತ್ತದೆ ಎಂಬ ನಂಬಿಕೆ.
ಮಳೆಯ ಪ್ರತೀಕವಾದ ಕಪ್ಪೆಯನ್ನು ಕತ್ತೆಯ ಮೇಲೆ ಕುಳಿಸಿ ಊರತುಂಬಾ ಮೆರವಣಿಗೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಮಳೆರಾಯ ಮತ್ತು ಕಪ್ಪೆಯ ಸಂಬಂಧ ಗಾಢವಾಗಿಯೇ ಇದೆ. ಉತ್ತರ ಕರ್ನಾಟಕದಲ್ಲೆಲ್ಲ ಮಳೆಗಾಗಿ ಆಚರಿಸುವ ಜೋಕುಮಾರ ಆಚರಣೆ ಬಲು ಪ್ರಸಿದ್ಧ. ಮಳೆಗಾಗಿ ಸಾಮೂಹಿಕ ಸಂತರ್ಪಣೆ ಮಾಡುವುದು, ವಿರಾಟಪರ್ವ ಓದಿಸುವುದೂ ಇದೆ. ಜೀವಂತ ಕಪ್ಪೆಯನ್ನು ಬಟ್ಟೆಯಲ್ಲಿ ಕಟ್ಟಿ ಒನಕೆಯ ತುದಿಗೆ ಕಟ್ಟುತ್ತಾರೆ. ಅದನ್ನು ಹಿಡಿದುಕೊಂಡು ಊರಿನ ತುಂಬಾ ಸುತ್ತುವುದು ಹಾಸನ ಪ್ರದೇಶದಲ್ಲಿರುವ ರೂಢಿ. ಜನರೆಲ್ಲ ಸೇರಿ ಮೆರವಣಿಗೆ ಹೊರಟು ಊರ ಹೊರಗಿನ ಪ್ರದೇಶದಲ್ಲಿ ಗುಂಡಿ ತೋಡುತ್ತಾರೆ. ಅಲ್ಲಿ ಸಿಪ್ಪೆ ಸಹಿತ ತೆಂಗಿನ ಕಾಯಿ ಹೂತರೆ ಮಳೆ ಬರುತ್ತದೆ ಎಂಬ ನಂಬಿಕೆಯೂ ಹಾಸನ ಕಡೆಯಿದೆ. ಕತ್ತೆ, ಕಪ್ಪೆ ವಿವಾಹ ಮಾಡುವ ಕ್ರಮ ಕೊಪ್ಪಳ ಸೇರಿದಂತೆ ಹಲವೆಡೆ ಪ್ರಚಲಿತದಲ್ಲಿದೆ.
ಮಳೆಗಾಗಿ ಬೋರ್ಗಲ್ಲಿಗೆ ನೀರು ಹಾಕುವ ಪರಂಪರೆ ಹಾವೇರಿ ಜಿಲ್ಲೆ ದೇವರಗುಡ್ಡದಲ್ಲಿದೆ. ಮೊನ್ನೆಯಷ್ಟೇ ಹುಯ್ಯೋ ಹುಯ್ಯೋ ಮಳೆರಾಯ ಎಂದು ಮಳೆರಾಯನಿಗೆ ಮೊರೆಇಟ್ಟಿದ್ದಾರೆ ಅಲ್ಲಿನ ಜನ. ಬೋರ್ಗಲ್ಲಿಗೆ ಹಾಕಿದ ನೀರು ಪೂರ್ವ ದಿಕ್ಕಿಗೆ ಹರಿಯಬೇಕು ಎಂಬ ನಂಬಿಕೆ. ೧೦೧ ಪುರುಷರು ಒದ್ದೆ ಬಟ್ಟೆಯಲ್ಲಿ ನೀರು ಹಾಕಿದರೆ, ೫ ವರ್ಷದೊಳಗಿನ ೫ ಬಾಲಕರು ಬೆತ್ತಲೆಯಾಗಿ ಕೊಡದಲ್ಲಿ ನೀರು ಹೊತ್ತು ಬೋರ್ಗಲ್ಲಿಗೆ ಹಾಕುತ್ತಾರೆ.
ಕ್ರೌರ್‍ಯವೆನ್ನೋಣವೇ?:ಮಳೆಗಾಗಿ ಕೆಲವು ಕ್ರೂರ ಕ್ರಮಗಳೂ ಇದೆ ಎಂಬುದು ಗಮನಾರ್ಹ. ತಾಳ್ಮೆ ಕಳೆದುಕೊಂಡು ವಿಚಿತ್ರ ಎನಿಸುವ ಆಚರಣೆಗಳು ಆಚರಿಸಲ್ಪಡುತ್ತವೆ. ಜೀವಂತ ಹಂದಿಯನ್ನು ಕುತ್ತಿಗೆ ವರೆಗೆ ಹುಗಿದು, ಅದಕ್ಕೆ ಆಹಾರ- ನೀರು ಕೊಡದೆ ಕಿರುಚಾಡಿ ಸಾಯುವಂತೆ ಮಾಡುವ ಕ್ರಮವೂ ನಮ್ಮಲ್ಲಿದೆ. ಮಳೆ ದೇವರನ್ನು ಬೈಯುವ, ಮಳೆಯ ಪ್ರತೀಕವಾದ ಕಪ್ಪೆಯನ್ನು ಬಿಸಿಲಿನಲ್ಲಿಟ್ಟು ಹಿಂಸಿಸುವ ಪದ್ಧತಿಯೂ ಇದೆ. ಕೆರೆಕಟ್ಟೆಯ ಮೇಲಿರುವ ದುಗ್ಗಮ್ಮ ದೇವರಿಗೆ ಕೋಲಾರದ ಕಡೆ ಕಲ್ಲು ಬೀರುತ್ತಾರೆ. ಜೋಕುಮಾರನ ವಿಗ್ರಹಕ್ಕೆ ಕೀಟ, ಹುಳುಗಳನ್ನು ಬಿಡುವುದೂ ನಮ್ಮವರಿಗೆ ಗೊತ್ತಿದೆ.
ಕುಮಟಾ ತಾಲೂಕಿನ ಧಾರೇಶ್ವರದಲ್ಲಿ ಮಳೆಗಾಗಿ ಮಾಡುವ ಆಚರಣೆ ಭಿನ್ನ, ಕಠಿಣ ಅಷ್ಟೇ ಘೋರವಾದದ್ದು. ಮಳೆ ಬರದೆ ಬರದ ಸ್ಥಿತಿ ಬಂದಾಗ, ಕೆರೆಯಲ್ಲಿರುವ ಈಶ್ವರ ಲಿಂಗವನ್ನು ರಥ ಬೀದಿಗೆ ತಂದಿಡುತ್ತಾರೆ. ಮೆಣಸಿನ ಕಾಯಿಯನ್ನು ನುಣ್ಣಗೆ ನುರಿದು ದೇವರ ಕಣ್ಣಿಗೆ ಹಚ್ಚುತ್ತಾರೆ. ತಲೆತಲಾಂತರದಿಂದ ಇರುವ ಈ ಆಚರಣೆಯನ್ನು ಮೂರು ವರ್ಷದ ಹಿಂದೆ ಮಾಡಿದ್ದರು. ಲಿಂಗಕ್ಕೆ ಮೆಣಸಿನ ಖಾರಾ ಹಚ್ಚಿ ಮೂರು ದಿನ ಇಟ್ಟಿದ್ದರು.
ಇದೊಂದು ವಿಚಿತ್ರ ಸಂಪ್ರದಾಯ. ಓದಿ ಬೈದುಕೊಳ್ಳಬೇಡಿ. ಉತ್ತರ ಕರ್ನಾಟಕ ಮತ್ತು ಮಲೆ ನಾಡಿನ ಕೆಲವೆಡೆಯೂ ಇದು ಇದೆ. ಜೂನ್ ಎರಡನೇ ವಾರ ಹಾವೇರಿ ಜಿಲ್ಲೆಯ ದೂದಿಹಳ್ಳಿಯಲ್ಲಿ ಇದನ್ನು ಆಚರಿಸಿದ್ದು ಲೇಟೆಸ್ಟ್ ಇವೆಂಟ್. ಹೂತಿರುವ ಶವಕ್ಕೆ ದೇವರ ಹೆಸರಲ್ಲಿ ಸುಣ್ಣದ ನೀರು ಬಿಟ್ಟರೆ ಮಳೆಯಾಗುತ್ತದೆ ಎಂಬುದು ಒಂಥರಾ ನಂಬಿಕೆ. ಹಿಂದಿನಿಂದ ಬಂದದ್ದನ್ನೇ ತಾವೂ ಮಾಡಿದ್ದೇವೆ ಎಂದು ಹೆಣಕ್ಕೆ ಸುಣ್ಣದ ನೀರು ಬಿಟ್ಟ ದೂದಿಹಳ್ಳಿ ಜನ ಹೇಳಿಕೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ಬೀರಪ್ಪ ದೇವರನ್ನು ಕುಳಿಸಿಕೊಂಡು ಒಂದಷ್ಟು ಜನರು ಸ್ಮಶಾನಕ್ಕೆ ತೆರಳಿದರು. ಹೆಣ ಹೂತಲ್ಲಿ ಅಗೆದು ತಲೆಬುರುಡೆಗೆ ಸುಣ್ಣದ ನೀರು ಬಿಟ್ಟರು. ಆದರೆ ಬಳಿಕದ ಒಂದೆರಡು ದಿನದಲ್ಲೂ ಮಳೆ ಮಾತ್ರ ಸುರಿಯಲಿಲ್ಲ! ತೊನ್ನು ಇರುವರು ಮೃತಪಟ್ಟಾಗ ಅವರ ಶವವನ್ನು ಹೂತರೆ ಸುತ್ತಲಿನ ಊರಲ್ಲಿ ಮಳೆಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಅಂತಹ ಶವವನ್ನು ಸುಡುವ ಅಥವಾ ಶವ ಹೂಳುವಾಗ ಉಪ್ಪು ಹಾಕಿ ಹೂಳುವ ನಂಬಿಕೆಯೂ ಇದೆ.
ಹಿಂದೂ ವೇದ, ಪುರಾಣದಲ್ಲಿ ವರುಣ ದೇವ ಮಳೆಯ ಅಧಿಪತಿ. ಸಿಡಿಲು- ಮಳೆಯ ಸೃಷ್ಠಿಗೆ ಈ ದೇವರೇ ಕಾರಣ. ಪರ್ಜನ್ಯ -ಮಳೆಗೆ ಕಾರಣವಾದ ಒಂದು ಯಜ್ಞ. ವರುಣ ಸೂಕ್ತವನ್ನು ಪಠಿಸಿ ಮಳೆಗೆ ಪ್ರಾರ್ಥಿಸಲಾಗುತ್ತದೆ. ಮಳೆಗಾಗಿ ವರುಣದೇವರನ್ನು ಪ್ರಾರ್ಥಿಸುವ ಶ್ಲೋಕ ಹೀಗಿದೆ:
ಯತ್ಕಿಂಚೇದಂ ವರುಣ
ದೈವೇ ಜನೇಧಿ ದ್ರೋಹಂ ಮನುಷ್ಯಾ ಶ್ಚರಾಮತಿ
ಅಚಿತ್ತಿ ಯತ್ತವ ಧರ್ಮಾ ಯುಯೋಪಿಮ ನಸ್ತಸ್ಮದೇನಸೋ ದೇವ ರೀರಿಷಹಾ
ಅಂದರೆ:ಎಲ್ಲರಿಂದಲೂ ಸ್ತುತಿಸಲ್ಪಡುವ ಹೇ ವರುಣ ಭಗವಂತನೆ, ಮನುಷ್ಯರಾದ ನಾವು ದೇವ ಸಮಾನರಾದ ಜನಗಳಲ್ಲಿ ತಿಳಿದೋ, ತಿಳಿಯದೆಯೋ ಮಾಡಿದ ಹಿಂಸಾ ಜನಕವಾದ ಕಾರ್‍ಯವನ್ನು ಆಭಿಚಾರಿಕ ಕ್ರಿಯೆಗಳ ಮೂಲಕ ಮಾಡಿದ್ದೇವೆಯೋ ಹಾಗೆಯೇ ಏಕಾಗ್ರತೆ ಇಲ್ಲದೆ ಪ್ರಮಾಧದಿಂದ ನಿನಗೆ ಪ್ರೀತಿಯುಂಟುಮಾಡುವ ಕಾರ್‍ಯಗಳನ್ನು ನಾಶಮಾಡಿದ್ದೇವೆಯೋ, ಅದರಿಂದುಂಟಾದ ಪಾಪಸಮೂಹಗಳನ್ನು ಕಾರಣವಾಗಿಟ್ಟುಕೊಂಡು ನಿನ್ನ ಆರಾಧಕರಾದ ನಮ್ಮನ್ನು ಹಿಂಸಿಸದೆ ವೃಷ್ಠಿಯನ್ನುಂಟುಮಾಡು.
‘ಕಾರಿರೀಷ್ಟಿ’ ಎಂಬ ಯಜ್ಞ ಮಳೆಗಾಗಿಯೇ ಇದೆ. ಮಳೆಗೆ ಉಂಟಾದ ಪ್ರತಿಬಂಧಕ ನಿವಾರಣೆಯನ್ನು ಈ ಯಜ್ಞದಿಂದ ಮಾಡುತ್ತಾರೆ. ಇವೆಲ್ಲ ಪುರಾಣ, ಜಾನಪದ, ನಂಬಿಕೆ ಎಂದೆಲ್ಲ ಹೇಳಬಹುದು. ಈಗ ಏನಿದ್ದರೂ ವಿಜ್ಞಾನ, ಕಂಪ್ಯೂಟರ್ ತಾಂತ್ರಿಕತೆಯದ್ದೇ ಮೇಲುಗೈ. ಮಳೆಗಾಗಿ ಮೋಡ ಬಿತ್ತನೆಯ ಕಾಲ. ವಿಮಾನದಲ್ಲಿ ಭಾನಿಗೆ ತೆರಳಿ ಕಪ್ಪು ಮೋಡದ ಮೇಲೆ ರಾಸಾಯನಿಕ ಸಿಂಪಡಣೆ. ಆ ಮೂಲಕ ಮೋಡ ತಂಪುಗೊಳಿಸಿ ಭೂಮಿಗೆ ಗಂಗೆ ಇಳಿಸುವ ತಂತ್ರಜ್ಞಾನ. ಜಾನಪದ, ಪರ್ಜನ್ಯಕ್ಕಿಂತ ಲಕ್ಷಾಂತರ ರು. ವೆಚ್ಚ ಮಾಡಿ ಮಳೆ ಸುರಿಸುವ, ಧರೆಗೆ ಇಳಿಸುವ ಕಾರ್‍ಯದ್ದೇ ಕಾರುಬಾರು. ಕಳೆದ ಎರಡು ವರ್ಷದ ಹಿಂದೆ ರಾಜ್ಯ ಮಳೆಯ ಅಭಾವ ಕಂಡಾಗ ಸರ್ಕಾರ ಇದನ್ನೇ ಮಾಡಿತ್ತು. ಮೋಡ ಭಿತ್ತನೆ ಯೋಜನೆ ಪ್ಲಾಪ್ ಆಯಿತು. ಲಕ್ಷಾಂತರ ರು. ನೀರಿನಲ್ಲಿ ತೇಲಿ ಬಿಟ್ಟಂತಾಯಿತು.
0 comments:
Post a Comment