Wednesday, July 30, 2008

ಮನದಾಳದಲ್ಲಿ ಊಟಿಯ ‘ಡೆಸ್ಟಿನಿ’




ಊಟಿಗೆ ಹೋಗುವುದೇ ಒಂದು ಹೊಸ ಅನುಭವ. ಅಲ್ಲಿನ ವಾತಾವರಣವೂ ಹೌದು. ಇದರೊಂದಿಗೆ ಇನ್ನಷ್ಟು ಹೊಸ ಅನುಭವ ನೀಡುವ ರಮ್ಯ ತಾಣ ಡೆಸ್ಟಿನಿ ಎಂಬ ಫಾರ್ಮ್ ಸ್ಟೇ.
ಡೆಸ್ಟಿನಿ ಊಟಿಯಿಂದ ೨೦ ಕಿ.ಮೀ ದೂರದಲ್ಲಿದೆ. ಅದು ಹೊರ ಜಗತ್ತಿನಿಂದ ಸಂಪೂರ್ಣ ದೂರವಿರುವ ಪ್ರದೇಶ. ಅದು ಹೊಟೇಲ್ ಅಥವಾ ರೆಸಾರ್ಟ್ ಅಲ್ಲ. ಊಟಿಗೆ ಹೋದವರು ಡೆಸ್ಟಿನಿ(ಫಾರ್ಮ್ ಸ್ಟೇ)ಯಲ್ಲಿ ಉಳಿದರೆ ಹೊಸ ಅನುಭವ ಸವಿಯಲು ಸಾಧ್ಯವಾಗುವ ವಾತಾವರಣ ಅಲ್ಲಿದೆ.
ಡೆಸ್ಟಿನಿಗೆ ಪ್ರಯಾಣಿಸುವ ರಸ್ತೆ ಮಾರ್ಗವೇ ಒಂದು ಅದ್ಬುತ ಅನುಭವ ನೀಡುತ್ತೆ. ಬೆಂಗಳೂರಿನಿಂದ ನಾವು ಊಟಿ, ಅಲ್ಲಿಂದ ೧೮ ಕಿ.ಮೀ ದೂರ ಕಾರಿನಲ್ಲಿ ಆರಾಮವಾಗಿ ಹೋಗಿದ್ದು. ಹಾಗಾದ್ರೆ ಮುಂದಿನ ೨ ಕಿ.ಮಿ ಪ್ರಯಾಣ ಕಷ್ಟವೇ?
ಕಷ್ಟವಲ್ಲ... ಆದ್ರೆ? ಅದೊಂಥರಾ ಸಾಹಸದ ಪ್ರಯಾಣ. ಕಾಶ್ಮೀರದ ಕಣಿವೆ ಪ್ರದೇಶದಲ್ಲಿ, ಲೇಹ್, ಲಡಾಕ್ ರಸ್ತೆಯಲ್ಲಿ ಈ ರೀತಿಯ ವಾಹನ ಸಾಗುವುದನ್ನು ಟಿವಿಯಲ್ಲಿ ನೋಡಿದ್ದೆ. ಅದು ಸೇನೆ ಬಳಸುವ ವಾಹನ. ಭಾರೀ ಗಟ್ಟಿಮುಟ್ಟಾದ, ಶಕ್ತಿ ಇರುವ ಟ್ರಕ್ ಅದು. ಆ ಟ್ರಕ್ ಮಾತ್ರ ಆ ರಸ್ತೆಯಲ್ಲಿ ಸುಲಭವಾಗಿ ಹೋಗೋದು. ಗುಡ್ಡ..ಗುಡ್ಡ.. ಕಾಡು... ತಿರುಗು ಮುರುಗು ರಸ್ತೆ.... ಏರಿಳಿತದ ರಸ್ತೆ. ಹೊಂಡ, ಕಲ್ಲಿನ ತುಂಡು. ಇದನ್ನೆಲ್ಲ ಲೆಕ್ಕಿಸದೇ ಹೋಗುವ ಆ ಟ್ರಕ್ ಪ್ರಯಾಣ ಒಂದು ರೀತಿಯ ಭಯ ಮಿಶ್ರಿತ ಆನಂದ ನೀಡುವುದರಲ್ಲಿ ಎರಡು ಮಾತಿಲ್ಲ.
ಹಾಗೆ ಸುಮ್ಮನೆ ಊಟಿಗೆ ಹೋದರೂ ಸರಿ, ಹನಿಮೂನ್ಗೆಂದು ಊಟಿಗೆ ಹೋಗಿದ್ದರೂ ಸರಿ. ಮೊದಲಬಾರಿಗೋ ಅಥವಾ ಹನಿಮೂನ್ಗೋ ಹೋದರೆ ಊಟಿ ಮನದಾಳದಲ್ಲಿ ಉಳಿದೇ ಉಳಿಯುತ್ತೆ. ಸಂದೇಹ ಬೇಡವೇ ಬೇಡ. ಅಲ್ಲಿನ ಪ್ರಕೃತಿಯೇ ಹಾಗೆ. ಡೆಸ್ಟಿನಿಯ ವಾತಾವರಣವೂ ಇದಕ್ಕೆ ಇಂಬು ಕೊಡುತ್ತದೆ.
ಸಿಟಿ ಜೀವನ ಮಾಡಿದವರಂತೂ ಡೆಸ್ಟಿನಿಯಲ್ಲಿ ಹೊಸ ಸನ್ನಿವೇಶ ನೋಡಲು ಸಾಧ್ಯ. ಕಾಡು, ಸುಂದರ ಪರ್ವತ ಶ್ರೇಣಿ ಊಟಿಯ ಸಾಮಾನ್ಯ ಚಿತ್ರಣ. ಡೆಸ್ಟಿನಿ ಅಂತಹ ಪರಿಸರದಲ್ಲೇ ಇದೆ. ಮೂರು ದಿಕ್ಕಿಗೂ ಹಸಿರು ಬೆಟ್ಟಗಳು. ಇನ್ನೊಂದೆಡೆ ನೀರು. ಪ್ರಕೃತಿಯ ರಮ್ಯ ವಾತಾವರಣದಲ್ಲಿ ಸಮಯ ಕಳೆದದ್ದೇ ತಿಳಿಯುವುದಿಲ್ಲ. ವಸತಿ, ಊಟದೊಂದಿಗೆ ಡೆಸ್ಟಿನಿಯಲ್ಲಿ ಹಲವು ವೈವಿಧ್ಯವಿದೆ.
ಏನೇನು ಇದೆ?: ಅಗ್ರಿಕಲ್ಚರ್ ಟೂರ್, ಮೌಂಟೇನ್ರಿಂಗ್ ಆಂಡ್ ರ್ಯಾಪ್ಲಿಂಗ್, ಹಾರ್ಸ್ ರೈಡಿಂಗ್, ಡೇರಿ ವಿಸಿಂಟ್, ರಿವರ್ ಕ್ರಾಸಿಂಗ್, ಟ್ರಾಕ್ಟರ್ ಆಂಡ್ ಓಪನ್ ಜೀಪ್ ರೈಡ್, ಸ್ಪೋರ್ಟ್ಸ್, ಫಿಶಿಂಗ್ ಇಲ್ಲಿದೆ. ಅವಲಾಂಚಿ ಡ್ಯಾಮ್ನ ಹಿನ್ನೀರು ಇಲ್ಲಿನ ಸೌಮ್ಯ ವಾತಾವರಣವನ್ನು ಇನ್ನಷ್ಟು ಆಕರ್ಷಣೀಯವಾಗಿಸಿದೆ.
ಡೆಸ್ಟಿನಿಯಲ್ಲಿ ಡಿಲಕ್ಸ್ ಮತ್ತು ಲಕ್ಸುರಿ ರೂಮ್ಗಳಿವೆ. ಸೀಸನ್ ಮತ್ತು ಆಫ್ ಸೀಸನ್ಗೆ ದರದಲ್ಲಿ ಹೆಚ್ಚು ಕಡಿಮೆ ಇದೆ. ಅಂದಹಾಗೆ ಸೀಸನ್ ಅವಧಿ ಮಾರ್ಚ್ ೧೬ರಿಂದ ಜೂನ್ ೧೫ ಮತ್ತು ಸೆಪ್ಟೆಂಬರ್ ೧೬ರಿಂದ ಜನವರಿ ೩೧. ಆಪ್ ಸೀಸನ್ ಜೂನ್ ೧೬ರಿಂದ ಸೆಪ್ಟೆಂಬರ್ ೧೫ ಮತ್ತು ಫೆಬ್ರವರಿ ೧ರಿಂದ ಮಾರ್ಚ್ ೧೫.
sundance
ಕಾಡು. ಎದುರಿಗೆ ನೀರಿನ (ವೀವ್ಪ್ಯಾಂಟ್)ಸರೋವರ. ಗೌಜು, ಗಲಾಟೆಯಿಲ್ಲ. ಆಧುನಿಕ ವಿನ್ಯಾಸದ ಸುಂದರ ಒಂಟಿ ಮನೆ. ನವೀನ ಒಳ ವಿನ್ಯಾಸ. ನೀವು ಅಥವಾ ನಿಮ್ಮವರು ಮಾತ್ರ ಅಲ್ಲಿ. ಹಾಗಾದ್ರೆ..ಅದು ಸನ್ಡ್ಯಾನ್ಸ್. ಹನಿಮೂನ್ಗೆ ಅಥವಾ ಏಕಾಂತಕ್ಕೆ ಹೇಳಿ ಮಾಡಿಸಿದ ಸ್ಥಳ.
sundance ಒಂದು ಸಿಂಗಲ್ ಕ್ಯಾಬಿನ್. ಡೆಸ್ಟಿನಿಯ ಹತ್ತಿರವೇ ಇರುವ ಏಕಾಂತ ಸ್ಥಳ. ಹನಿಮೂನ್ಗೆ ಎಂದು ಊಟಿಗೆ ಹೋದ್ರೆ sundane ನಲ್ಲಿ ಒಂದು ಪೂರ್ತಿ ದಿನ ಕಳೆಯಲೇ ಬೇಕು ಎಂದು ಅನಿಸದೇ ಇರದು.
ನಮ್ಮನ್ನು sundance ಕರೆದೊಯ್ದ ಪೊನ್ನಪ್ಪ ಭರ್ಜರಿ ಸಾಹಸಿಗ. ಬೋಳು ಗುಡ್ಡೆಯ ತುದಿಯ ಓರೆ...ಕೋರೆಯ ರಸ್ತೆಯಲ್ಲಿ ಅದೇಗೆ ಆ ಜೀಪು ಬಿಟ್ಟಿದ್ರು ಅಂದ್ರೆ.. ಅಬ್ಬಾ...!
ಅಥವಾ ಡೆಸ್ಟಿನಿಗೆ ಪ್ರಯಾಣ ಮಾಡುವುದೇ ಒಂದು ಥ್ರಿಲ್. ಸುಮಾರು ೩ ಕಿ.ಮಿ. ಗುಡ್ಡದ- ಕಡಿದಾದ ರಸ್ತೆಯಲ್ಲಿ ಮಾಡುವ ಪ್ರಯಾಣ ಒಂದು ಅದ್ಬುತ ಅನುಭವ.
www.littlearth.in

Friday, July 18, 2008

ಮಳೆ ಅರಿಯಲು ಒಂದು ಗಾದೆ



ಆಗಿಯ ಹುಣ್ಣೆಮೆ ಹೋದ
ಮಿಗೆ ೩ ದಿನಕ್ಕೆ,
ಮೃಗಧರನ ಕೂಡ,
ಮೃಗವಿರಲು ಮಳೆಗಾಲ ಜಗದಣಿಯಲಕ್ಕು ಸರ್ವಜ್ಞ.

ಮಳೆಗಾಲದ ಕುರಿತು ಸರ್ವಜ್ಞ ಹೀಗೆ ಹೇಳಿದ್ದಾರೆ. ನಿಜಕ್ಕೂ ಮಳೆ ಒಂದು ಅದ್ಭುತ ಪ್ರಾಕೃತಿಕ ಶಕ್ತಿ. ಇಳೆಗೆ ಜೀವ ಪೋಷಕ. ಇದಕ್ಕೇ ಮಳೆಯ ಕಲ್ಪನೆ, ನಂಬಿಕೆಯೂ ವಿಶಿಷ್ಟ. ಮಳೆಗೆ ಪೂಜ್ಯ ಸ್ಥಾನವೂ ಇದೆ. ಮಳೆ ಸುರಿಯುವಂತೆ ಕೈಗೊಳ್ಳುವ ಹಬ್ಬಗಳಲ್ಲೂ ಪ್ರಾದೇಶಿಕ ವೈವಿಧ್ಯ. ಕೃಷಿಕರು, ಗ್ರಾಮೀಣ ಜನರು ಮಳೆಯ ವಿವರಣೆ ಕೊಡುವ ಶೈಲಿಯೂ ಬೇರೆ.
ಕನ್ಯಾ ತಿಂಗಳ ಮಳೆ ಕಂಡಲ್ಲಿ ಹೊಯ್ಯುದ್ರೆ, ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ. ಮಗೆ ಮಳೆ ಮೊಗೆ ಮೊಗೆದು ಹೊಯ್ಯುತ್ತೆ. ಹುಬ್ಬೆ ಮಳೆ ಹೊಯ್ದರೆ ಅಬ್ಬೆ ಮೊಲೆಹಾಲು ಉಂಡಷ್ಟು ಒಳ್ಳೆದು. ಸ್ವಾತಿ ಮಳೆ ಹೊಯ್ದರೆ ಸಮುದ್ರದಲ್ಲಿ ಮುತ್ತು ಬೆಳೀತು. ಹೀಗೆ ಬಗೆಬಗೆಯಾಗಿ ಮಳೆಯನ್ನು ಗಾದೆ ಮಾತಲ್ಲಿ ಹೇಳುತ್ತಾರೆ. ಆಯಾ ನಕ್ಷತ್ರದ ಮಳೆ ಹೇಗೆ ಎಂಬುದನ್ನು ಅರಿಯಲು ಒಂದು ಗಾದೆ ಸಾಕು. ಒಂದೊಂದು ಮಳೆಗೂ ಒಂದು ಗುಣಲಕ್ಷಣ.
ಅಸಲೆ(ಆಶ್ಲೇಷಾ) ಮಳೆಗೆ ಹಂಚಿನ ಮೇಲೆಲ್ಲ ಹುಲ್ಲು, ಭರಣಿ ಸುರದ್ರೆ ಭರಗಾಲದ ಭಯವಿಲ್ಲ, ಭರಣಿ ಹುಯ್ದರೆ ಧರಣೆಲ್ಲ ಬೆಳೆ.
ಸ್ವಾತಿ ಚೇತನ :ಸ್ವಾತಿಯ ಮಳೆ ಹೋದ ಮ್ಯಾಗ ಐತೇನು?, ಚಿತ್ತಿ, ಸ್ವಾತಿ ಆದ್ರೆ ಹಿಂಗಾರಿ ಬೆಳೆ ಬಂಗಾರ್ದಂಗೆ, ಸ್ವಾತಿ ಮಳೆಯಾದ್ರೆ ಹುಲ್ಲೂ ಹೊಡೆ, ಸ್ವಾತಿ ಮಳೆಯಾದ್ರೆ ಚಾಪೆ ಕೆಳಗಿನದೂ ತೆನೆಯಾಗ್ತದೆ. ಸ್ವಾತಿ ಮಳೆ ಹೇಗೆ ಆರ್ಭಟಿಸುತ್ತದೆ ಎಂಬುದಕ್ಕೆ: ಸ್ವಾತಿ ಮಳೆ ಹೊರಗೆ ಹೋಗಿ ಹೇಲೋಕೂ ಬಿಡೋದಿಲ್ಲ.
ಹಸ್ತಾ ಮಳೆ ಸಮೃದ್ಧಿ :ಈ ಮಳೆ ಸುರಿಯದಿದ್ದರೆ ಕಷ್ಟ ತಪ್ಪಿದ್ದಲ್ಲ ಎಂಬ ಮಾತು ಇದೆ. ಹಸ್ತ ಮಳೆ ಆಗದಿದ್ರೆ ಹಲ್ಲು ಕಿಸ್ತಾ, ಹಸ್ತದ ಮಳೆ ಆಗದಿದ್ದರೆ ಹೆತ್ತ ತಾಯಿ ಹಿಟ್ಟು ಕೊಡಲ್ಲ ಎನ್ನುತ್ತಾರೆ.
ಹಸ್ತಾ ಮಳೆಯ ರೈತ ಮಿತ್ರ ಎಂಬ ನಂಬಿಕೆ. ಈ ಮಳೆ ರೈತನ ಕೈ ಹಿಡಿಯುತ್ತದೆ. ಹಸ್ತಾ ಕೈ ಭಾಷೆ ಕೊಟ್ಟಿದೆ ಎನ್ನುತ್ತಾರೆ ರೈತರು. ಮನ ಬಂದಂತೆ ಬೀಳುವ ಮಳೆ ಚಿತ್ತಾ. ಅದಕ್ಕೆ ಕುರುಡು ಚಿತ್ತೆ ಎನ್ನುತ್ತಾರೆ. ಅಣ್ಣನ ಮನೆಲಿ ಚಿತ್ತೆ ಬಿದ್ರೆ ತಮ್ಮನ ಮನೆಯಲ್ಲಿ ಬೀಳುವುದಿಲ್ಲವಂತೆ.
ಉತ್ತರ ಮಳೆ ಬಂದ್ರೆ ಬಿತ್ತಿದ್ದೆಲ್ಲಾ ಫಲ, ಉತ್ರೆ ಮಳೆಗೆ ಹುಟ್ಟ ಹುಲ್ಲೆಲ್ಲ ಹೊಡೆ.
ಮೃಗಸಿರಿ ಮಳೆಗೆ ಮಿಕ್ಪಕ್ಕದ್ದೆಲ್ಲ ಚೆಲ್ಲಬೇಕು ಎನ್ನುತ್ತಾರೆ. ಅದಕ್ಕೇ ಮೃಗಶಿರಾ ಮಳೆಯಲ್ಲಿ ಕೃಷಿಕರು ಸಸಿ, ಗಿಡಗಳನ್ನು ಹೆಚ್ಚು ನಾಟಿ ಮಾಡುತ್ತಾರೆ. ಆರಿದ್ರಿ ಮಳೆಲಿ ಹಚ್ಚಿದರೆ ಆರುಕಾಯಿ ಹೆಚ್ಚು, ಅಶ್ವಿನಿ ಮಳೆಗೆ ಆರುಕಟ್ಟು, ಭರಣಿ ಮಳೆಗೆ ಬೀಜ ಬಿತ್ತು ಎನ್ನೋದು. ಕುಲ್ಡನ ಮಳೆಗೆ ಕಲ್ಲಂಗ್ಡಿ ಊರಿದ್ರೆ ಉಲ್ಡುಲ್ಡಿ ಕಾಯಿ ಬಿಡ್ತವೆ ಎನ್ನೋ ನಂಬಿಕೆ.
ಉಬ್ಬೆ ಮಳೇಲಿ ಮೋಡ ಉಬ್ಬುಬ್ಬಿ ಬರುತ್ತೆ ಎಂಬ ಮಾತು. ಮಗೆ ಮಳೆ ನಂಜಿನ ಮಳೆ. ತುಂಬಾ ಮಳೆಯಾದ್ರೆ ನಾಟಿ ಮಾಡಿದ ಸಸಿಗಳು ಕೊಳೆಯುತ್ತವೆ.
ಮಳೆಯೇ ಇಲ್ಲವಾದ್ರೆ: ಮಳೆ ಇಲ್ಲದ ಪೈರು ಮಾತು ಇಲ್ಲದ ಕೂಸು ಸಮ ಎನ್ನುತ್ತಾರೆ.
ಕೆಲವು ಮಳೆಗಳು ಅಕಾಲದಲ್ಲಿ ಸುರಿದು ಬೆಳೆ ಹಾಳು ಮಾಡುತ್ತದೆ. ಅಂತಹ ಮಳೆತಿ ಮೆದೆಗೆಡುಕ ಕಣಗೆಡುಕ.
ಭಾರೀ ಮಳೆ ಬಂತು ಎನ್ನಿ, ಆವಾಗ ಏನಪ್ಪಾ ಮಳೆ... ಹೇಳೋದು ಸಾಮಾನ್ಯ. ಅದಕ್ಕೆ- ‘ಮಳೆ ಬಂದರೆ ಕೇಡೇ, ಮಗ ಉಂಡ್ರೆ ಕೇಡೇ’. ಮಗ ಊಟ ಮಾಡಿದ್ರೆ ತೊಂದ್ರೆ ಆಗುತ್ಯೇ? ಹಾಗೇ ಮಳೆ ಹೊಯ್ದರೆ ಕೇಡು ಆಗುವುದುಂಟೇ ಎಂದು ಹೇಳುತ್ತಾರೆ.
ಬೆಳಗ್ಗೆ ಬಂದ ನೆಂಟ ರಾತ್ರಿವರೆಗೆ ಇರುವುದಿಲ್ಲ ಎಂದೂ ಸಂಜೆ ಬಂದ ಮಳೆ ಮತ್ತು ನೆಂಟ್ರು ಬೇಗನೆ ಹೋಗುವುದಿಲ್ಲ ಎಂಬ ವಾಡಿಕೆಯೂ ಇದೆ.
ಮಳೆ ಮುನ್ಸೂಚನೆ :ಮುಂಗಾರು ಕೇರಳ ಪ್ರವೇಶಿಸಿದೆ, ಬಂಗಾಳಕೊಲ್ಲಿ ಪ್ರವೇಶಿಸಿದೆ ಇನ್ನೇನು ವಾರದಲ್ಲಿ ಇಲ್ಲಿಗೆ ಬರುತ್ತದೆ ಎಂದು ಈಗ ಹವಾಮಾನ ತಜ್ಞರು ಸಾಧ್ಯತೆಯ ವರದಿ ನೀಡುತ್ತಾರೆ. ಹಾಗಾದ್ರೆ ಮೊದಲು ಮಳೆ ಮುನ್ಸೂಚನೆ ಯಾರು ಕೊಡ್ತಿದ್ರು?
ಮಲೆನಾಡಿನಲ್ಲಿ ಒಂದು ಜಾತಿಯ ಇರುವೆ ರೆಕ್ಕೆ ಪಡೆದು ಭೂಮಿಯಿಂದ ಹೊರಕ್ಕೆ ಬರುತ್ತದೆ. ಎಷ್ಟೆಂದರೆ ಆ ಪ್ರದೇಶದಲ್ಲಿ ಮಾಮೂಲಿಯಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಮುಖ, ಮೈಗೆ ಮುತ್ತಿಕೊಳ್ಳುತ್ತವೆ. ಇದು ಕೂಡಾ ಮಳೆಯ ಮುನ್ಸೂಚನೆ. ಇನ್ನು ಕಿಟ್ರ್ರ್..... ಎಂದು ಕೂಗುವ ಮಳೆ ಜಿರಲೆ ಪ್ರತ್ಯಕ್ಷವಾಗುವುದು ಮಳೆಯ ಮುನ್ಸೂಚನೆ. ಮಳೆಗಾಲದ ಆರಂಭದಲ್ಲಿ ಮಾತ್ರ ಕೂಗಿ ಕೂಗಿ ಮಳೆ ಕರೆದು ತನ್ನ ಕಾರ್ಯ ಪೂರ್ತಿಗೊಳಿಸುತ್ತದೆ ಈ ಮಳೆ ಜಿರಲೆ. ಆರ್ಕಿಡ್ ಜಾತಿಯ(ಪರಾವಲಂಬಿ ಸಸ್ಯ) ಸೀತಾಳೆ ಹೂವು ಮರದ ಮೇಲೆ ಬಿಡುವುದು, ಚಳ್ಳೆ ಹಣ್ಣು ಬಿಡುವುದು, ಕಾಗೆ ಕೂಗುತ್ತ ಊರು ಸುತ್ತಿದ್ರೆ ಮಳೆ ಬರುತ್ತದೆ ಎಂಬ ಮುನ್ಸೂಚನೆ.
ಕುಂಡ ಬೆಳಕು ಮರದ ತುದಿ ಏರಿದ್ರೆ ಮಳೆಗಾಲ ಆರಂಭ ಎಂಬ ಇನ್ನೊಂದು ಮಾತಿದೆ. ಕುಂಡ ಬೆಳಕು ಅಂದ್ರೆ ಕುಂಡೆ ಭಾಗದಲ್ಲಿ ಬೆಳಕು ಸೂಸುವ ಒಂದು ಜಾತಿ ಹುಳು. ಮಲೆನಾಡಿನಲ್ಲಿ ಇವು ಮಳೆಗಾಲದ ಆರಂಭದಲ್ಲಿ ಕಂಡಬರುತ್ತವೆ. ಈ ಹುಳುಗಳು ಬೆಳಕು ಸೂಸುತ್ತ ಮರದ ತುದಿಯ ವರೆಗೆ ಹಾರಾಡಿದ್ರೆ ಮಳೆಗಾಲ ಶುರುವಾಗಿದೆ ಎಂದೇ ಅರ್ಥ.
ಗುಬ್ಬಿ ಮಣ್ಣು ಸ್ನಾನ ಮಾಡಿದ್ರೆ, ಎತ್ತು ತಂಪು ಹೊತ್ತಿನಲ್ಲಿ ಕತ್ತು ಎತ್ತಿ ಆಕಾಶ ಮೋಡಿದ್ರೆ, ಮುಸ್ಸಂಜೆಯಲ್ಲಿ ಗೂಬೆ ಕೂಗಿದ್ರೆ, ಬೆಕ್ಕು ಮುಖ ತೊಳಿದ್ರೆ, ಕಪ್ಪೆ ಎಡೆಬಿಡದೆ ಒಟ ಗುಟ್ಟಿದ್ರೆ ಕೂಡಾ ಮಳೆಯ ಮುನ್ಸೂಚನೆ ಎಂದು ಬಗೆಯುತ್ತಾರೆ. ಡಾಂಕ್ರರ್ ಕಪ್ಪೆ(ದೊಡ್ಡ ಕಪ್ಪೆ) ಡ್ರಾಂಕ್.. ಡ್ರಾಂಕ್... ಎಂದು ಸಾಮೂಹಿಕವಾಗಿ ಕೂಗುತ್ತಿದ್ದರೆ ಅದು ಮಳೆ ಕರೆಯುತ್ತಿದೆ ಎಂಬ ಭಾವನೆ.
ಮುಗೀತಾ ಮಳೆಗಾಲ? :ಚಂದ್ರನ ಸುತ್ತ ಮಂಡಲ ಬಂದ್ರೆ, ಬೆಳಗ್ಗೆ ಇಬ್ಬನಿ ಹೆಚ್ಚಿಗೆ ಬಿದ್ರೆ, ಎರಡು ಕಾಮನಬಿಲ್ಲು ಕಟ್ಟಿದ್ರೆ ಮಳೆಗಾಲ ಮುಗಿತು ಎಂಬ ನಂಬಿಕೆ.
ಒಟ್ಟು ೨೭ ಮಳೆ ನಕ್ಷತ್ರಗಳಿವೆ. ಅವು, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಗಾ, ಹುಬ್ಬಾ, ಉತ್ತರಾ, ಹಸ್ತ, ಚಿತ್ತ, ಸ್ವಾತಿ, ವಿಶಾಖಾ, ಅನುರಾಧಾ, ಜೇಷ್ಠ, ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿತ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ. ಎಲ್ಲ ನಕ್ಷತ್ರಗಳೂ ಮಳೆ ಸುರಿಸುವುದಿಲ್ಲ.

Wednesday, July 16, 2008

ಪಾಪ...ಅದು ಕಾಡು ಪಾಪಾ?


ಹುಲಿ ಚರ್ಮ, ಹಲ್ಲು ಅಥವಾ ಆನೆಯ ದಂತ ಸ್ಮಗ್ಲಿಂಗ್ ಮಾಡುವುದು ಇಂದಿಗೂ ಕೊನೆ ಕಾಣದ ಕೃತ್ಯ. ಇರುವ ಅಲ್ಪ ಅರಣ್ಯದಲ್ಲೇ ಉಳಿದ ವನ್ಯ ಜೀವಿಗಳ ಸಂರಕ್ಷಣೆಗೆ ಅದೆಷ್ಟೋ ಕಾನೂನು- ಯೋಜನೆ. ಕೋಂಟ್ಯತರ ರುಪಾಯಿ ವ್ಯಯ. ಈನಡುವೆ ಹಲವು ವನ್ಯ ಪ್ರಾಣಿಗಳು ಅಳಿವು- ಉಳಿವಿನ ಘಟ್ಟಕ್ಕೆ ತಲುಪಿವೆ. ಅದರಂತೆ, ವನ ಮನುಷ್ಯ ಎಂದು ಕರೆಯುವ ಮುಗ್ದ, ಸೂಕ್ಷ್ಮ ಪ್ರಾಣಿ ಕಾಡುಪಾಪಾ ವಿಪತ್ತಿನಲ್ಲಿರುವ ಜೀವಿ. ಶ್ರೀಲಂಕಾ, ದಕ್ಷಿಣ ಭಾರತದಲ್ಲಿ ಮಾತ್ರ ಇರುವ( Slender lories)ಕಾಡುಪಾಪಾ ರಕ್ಷಣೆ ಯಾರ ಹೊಣೆ?

ಅರಣ್ಯನಾಶ ಅದೆಷ್ಟೂ ವಿಪತ್ತಿಗೆ ಆಹ್ವಾನ ನೀಡಿದೆ. ಕಾಡು ಬಿಟ್ಟು ನಾಡಿಗೆ ಮಾನವ ಬಂದಿದ್ದರೂ ಕಾಡಿನ ಅವಲಂಬನೆ ತಪ್ಪಿಲ್ಲ. ಅರಣ್ಯ ಉತ್ಪನ್ನಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗೇ, ಅರಣ್ಯವಾಸಿ ಜೀವಿಗಳ ಮೌಲ್ಯವೂ ಏರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಳ್ಳ ವ್ಯವಹಾರಕ್ಕೆ ನಮ್ಮ ಪಕ್ಕದ ಗೇರುಸೊಪ್ಪಾ ಅರಣ್ಯವೋ, ಕತ್ತಲೆಕಾನು, ಶರಾವತಿ ನದಿ ಪ್ರದೇಶವೋ ಅಥವಾ ಇನ್ನಾವುದೋ ದಟ್ಟ ಅರಣ್ಯವೇ ಮೂಲ. ಅಪರೂಪದ ಸಸ್ಯ, ಬೇರು, ಪ್ರಾಣಿ ಎಲ್ಲವೂ ಸ್ಮಗ್ಲಿಂಗ್ ವಸ್ತುಗಳಾಗಿಬಿಟ್ಟಿದೆ. ಕಾಡುಪಾಪಾ ಇಂಥ ಕಳ್ಳ ಸಾಗಣೆಗೆ ಸಿಕ್ಕಿದ ಮುಗ್ದ ಜೀವಿ.
ಶ್ರೀಲಂಕಾ, ದಕ್ಷಿಣ ಭಾರತದ ಅರಣ್ಯ ಪ್ರದೇಶ ಕಾಡುಪಾಪಾದ ಮೂಲ ನೆಲೆ. ಹಗಲೆಲ್ಲಾ ನಿದ್ದೆ ಮಾಡುವ ಕಾಡುಪಾಪಾ ಕಾಣಸಿಗುವುದೇ ಅಪರೂಪ. ಮರದ ಮೇಲೆಯೇ ಜೀವನ ಕಳೆಯುವ ಜೀವಿ ನೆಲಕ್ಕೆ ಇಳಿಯುವುದೂ ಕಡಿಮೆಯೇ. ದಟ್ಟ ಅರಣ್ಯದಲ್ಲಿ ಮರದಿಂದ ಮರಕ್ಕೆ ದಾಟುತ್ತಲೇ ಕ್ರಮಿಸುವುದು ಕಾಡುಪಾಪಾ ಜೀವನ ಶೈಲಿ. ಮರದ ಮೇಲೆ ಓಡಾಟ, ಆಹಾರ ಭೇಟೆ, ನಿದ್ದೆ, ಸಂತಾನೋತ್ಪತ್ತಿ.. ಹೀಗೆ
ಈ ಪ್ರಾಣಿ ಇಂದು ವಿಪತ್ತಿನಲ್ಲಿದೆ. ಒಂದು ಕಾಲದಲ್ಲಿ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಕಾಡುಪಾಪಾಕ್ಕೆ ಸುರಕ್ಷಿತ ನೆಲೆಯಾಗಿತ್ತು. ಕ್ಷೀಣಿಸಿದ ಈ ಜೀವ ಸಂತತಿಗೆ ಇಂದು ಮೌಲ್ಯ ಹೆಚ್ಚಿದೆ. ಕಾಡುಪಾಪಾ ಕಳ್ಳಸಾಕಣೆಯೂ ಹೆಚ್ಚಿದೆ.

ಬೇಡಿಕೆ ಯಾಕೆ: ಕಾಡುಪಾಪಾವನ್ನು ವನ ಮನುಷ್ಯ ಎಂದೂ ಕರೆಯುತ್ತಾರೆ. ಈ ಚಿಕ್ಕ ಪ್ರಾಣಿಯನ್ನು ತಿನ್ನುವ ಬಗ್ಗೆ ಮಾಹಿತಿ ಇಲ್ಲ. ಇದು ರಾತ್ರಿ ಸಂಚಾರಿ. ಹಗಲು ಹೊತ್ತಿನಲ್ಲಿ ಚಲನ- ವಲನ ವಿರಳ.ಕೆನೆತ್ ಅಂಡರ್‌ಸನ್ ಕೆನರಾ ಫಾರೆಸ್ಟ್‌ನಲ್ಲಿ ಬೇಟೆ ಮಾಡುವಾಗ ಕಾಡು ಪಾಪಾ ಅಡ್ಡಿಪಡಿಸಿದ್ದು ಮತ್ತು ಈ ಪ್ರಾಣಿಯ ಕಣ್ಣಿಗೆ ಬೇಡಿಕೆ ಇರುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎನ್ನುತ್ತಾರೆ ಶ್ರೀಧರ್ ಭಟ್. ಮಾಟಮಂತ್ರದಲ್ಲಿ ಕಾಡಾಪಾಪಾದ ಕಣ್ಣು ಬಳಸುತ್ತಾರೆ. ಕಣ್ಣಿನ ದೋಷ ಇರುವವರು ಈ ಚಿಕ್ಕ ಪ್ರಾಣಿಯ ಕಣ್ಣು ತಿಂದರೆ ವಾಸಿಯಾಗುತ್ತದೆ ಎಂಬ ಮೂಢನಂಬಿಕೆ ಇದೆ. ಹೊರ ದೇಶಗಳಲ್ಲಿ ಕಾಡು ಪಾಪಾ ಸಾಕುತ್ತಾರೆ ಎಂಬ ಅಭಿಪ್ರಾಯಯವೂ ಇದೆ. ಜಾವಾದ ಪಕ್ಷಿ ಮಾರುಕಟ್ಟೆಯಲ್ಲಿ ಕಾಡು ಪಾಪಾ ಮಾರಾಟದ ಕುರಿತು ಇಂಟರ್‌ನೆಟ್‌ನಲ್ಲಿ ಅಲ್ಪ ಸ್ಪಲ್ಪ ಮಾಹಿತಿ ಕಾಣುತ್ತದೆ.
ಚಿಕ್ಕ ಕೀಟ, ಹಣ್ಣು, ಚಿಗುರು ಎಲೆ, ಕೀಟದ ಮೊಟ್ಟೆ, ಮರ ಕಪ್ಪೆ, ಕೆಲವು ಜಾತಿಯ ಹೂವುಗಳು ಈ ಪ್ರಾಣಿಯ ಆಹಾರ. ಹಗಲು ಪೂರ್ತಿ ನಿದ್ದೆ ಮಾಡುವ ಕಾಡುಪಾಪಾ ಸಂಜೆಯಾಗುತ್ತಿದ್ದಂತೆ ಕ್ರಿಯಾಶೀಲವಾಗುತ್ತದೆ. ಮೂರ್ತಿ ತುಂಬಾ ಚಿಕ್ಕದು. ಅಂದರೆ, ಕಾಡಾಪಾಪಾದ ತೂಕ ೮೫ರಿಂದ ೩೫೦ ಕಿ.ಗ್ರಾಮ್. ಎತ್ತರವೂ ಅಷ್ಟೆ ೬.೫ ರಿಂದ ೧೦.೫ ಇಂಚು ಮಾತ್ರ. ೧೫ ವರ್ಷ ಜೀವಿತ ಅವಧಿ. ಬೆಲೆ ಮಾತ್ರ ಸ್ಥಳೀಯರಿಗೆ ಗೊತ್ತಾಗುವುದಿಲ್ಲ. ಹತ್ತಾರು ಸಾವಿರ ಇರಬಹುದು ಎಂದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷ ರು. ಬೆಲೆ ಇರಬಹುದು ಎಂಬುದು ಅಂದಾಜು. ಆದರೆ, ಇಲ್ಲಿ ಹಿಡಿದ ಕಾಡುಪಾಪಾವನ್ನು ಎಲ್ಲಿಗೆ ಸಾಗಿಸಲಾಗುತ್ತದೆ ಎಂಬ ಮಾಹಿತಿ ಸಷ್ಟವಿಲ್ಲ.
ಉತ್ತರ ಕನ್ನಡದ ಕೆನರಾ ವಲಯದ ಗೇರುಸೊಪ್ಪಾದಲ್ಲಿ ಕಾಡು ಪಾಪಾ ಹೆಚ್ಚಿನ ಸಂಖ್ಯೆಯಲ್ಲಿದೆ. ವೈಡ್ ಲೈಫ್ ಪ್ರೆಟೆಕ್ಶನ್ ಆಕ್ಟ್ ಪ್ರಕಾರ ಕಾಡು ಪಾಪಾವನ್ನು ಶೆಡ್ಯೂಲ್ ೧ ಎನಿಮಲ್ ಎಂದು ಪರಿಗಣಿಸಲಾಗಿದೆ. ಇದನ್ನು ಕೊಲ್ಲುವುದು, ಮಾರಾಟ, ಸಾಗಾಟ ಮಾಡಿದವರನ್ನು ಜಾಮೀನು ರಹಿತ ಬಂಧನ ಮಾಡಲು ಅವಕಾಶವಿದೆ .ವರ್ಷಗಶ ಹಿಂದೆ ಉತ್ತರ ಕನ್ನಡದ ಹೊನ್ನಾವರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ೫ ಕಾಡುಪಾಪಾವನ್ನು ಹಿಡಿದು ತಂದಿದ್ದ ಇಬ್ಬರನ್ನು ಬಂಧಿಸಿದ್ದರು. ವಸತಿ ಗೃಹವೊಂದರಲ್ಲಿ ಅದನ್ನು ಬಚ್ಚಿಟ್ಟು, ಕಳ್ಳ ಸಾಗಣೆಗೆ ಹೊಂಚು ಹಾಕಿದ್ದರು. ಇದು ಒಂದು ಸಿಕ್ಕಿ ಬಿದ್ದ ಪ್ರಕರಣ. ಈ ಮೊದಲು ಎಷ್ಟು ಕಾಡು ಪಾಪಾ ಕಳ್ಳ ಸಾಗಣೆಯಾಗಿದೆಯೋ ಏನೋ?
ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್‌ರ್‌ವೇಷನ್ ಆಫ್ ನೇಚರ್- ಕಾಡು ಪಾಪಾವನ್ನು ರೆಡ್‌ಲಿಸ್ಟ್‌ನಲ್ಲಿ ಸೇರಿಸಿದೆ. ವಿಶ್ವದ ವಿಪತ್ತಿನಲ್ಲಿರುವ ಇರುವ ಪ್ರಾಣಿ ವರ್ಗದಲ್ಲಿ ಕಾಡುಪಾಪಾವೂ ಒಂದು. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕಾಡು ಪಾಪಾ ದಿನದಿಂದ ದಿನಕ್ಕೆ ಕಡಿಮೆಯಾದರೆ, ಕಣ್ಮರೆ ಅಸಾಧ್ಯದ ಮಾತೇನಲ್ಲ. ಅರಣ್ಯ ಇಲಾಖೆ ಈ ಸೂಕ್ಷ್ಮ ಪ್ರಾಣಿಯ ಸಂರಕ್ಷಣೆ, ಸ್ಥಿತಿಯ ಅಧ್ಯಯನದತ್ತ ಗಮನ ಹರಿಸದಿರುವುದೂ ವಿಷಾದಕರವೇ.
ಕರ್ನಾಟಕದ ಪಶ್ಚಿಮ ಘಟ್ಟ(ಉತ್ತರ ಕನ್ನಡ ಜಿಲ್ಲೆಯ ಕೆನರಾ ಅರಣ್ಯ ವಲಯದಲ್ಲಿ ಕಾಡುಪಾಪಾ ಸಾಕಷ್ಟಿದೆ), ಆಂಧ್ರಪ್ರದೇಶದ ಅರಣ್ಯದಲ್ಲಿ ಅಳಿಯುತ್ತಿರುವ ವನ್ಯ ಜೀವಿಯ ಸಮಸ್ಯೆಯ ಅಧ್ಯಯನ ಮಾಡುವವರು ಯಾರು? ವನ ಮನುಷ್ಯನನ್ನು ಬದುಕಿಸುವರು ಯಾರು?

Saturday, July 5, 2008

ಸುರಿದೀತೆ ಹನಿ ಹನಿ ಮಳೆ?


‘ಮುಂಗಾರು ಮಳೆ’ ‘ಚೆಲ್ಲಾಟ’ ಆಡುತ್ತಿದೆ. ಜೂನ್ ತಿಂಗಳು ಕಳೆದರೂ ರಾಜ್ಯದಲ್ಲಿ ಮಳೆರಾಯ ಮಣ್ಣಿಗೆ ತಂಪು ನೀಡಿಲ್ಲ. ಅಲ್ಲಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ, ಕಪ್ಪೆ ಮದುವೆ ಅಲ್ಲದೆ ಮೆರವಣಿಗೆಯೂ ಶುರುವಾಗಿದೆ. ಹಾಗಾದರೆ ನೈಸರ್ಗಿಕವಾಗಿ ಸುರಿಯುವ ಮಳೆಯನ್ನು ಮಾನವ ಯತ್ನದಿಂದ ಧರೆಗಿಳಿಸಲು ಸಾಧ್ಯವೇ? ಮಳೆಗಾಗಿ ವಿಮಾನ ಏರಿ ಮೋಡ ಭಿತ್ತನೆ ಮಾಡಿದರೆ ಸುರಿದೀತೆ ಹನಿ ಹನಿ ಮಳೆ? ಬಿಟ್ಟು ಬಿಡಿ ಇಂಥ ವ್ಯರ್ಥ ಪ್ರಯತ್ನಗಳನ್ನೆಲ್ಲಾ ಹಾಗೆ ಸುಮ್ಮನೆ ಎನ್ನುತ್ತೀರಾ? ಜಾನಪದ, ಧಾರ್ಮಿಕ ಆಚರಣೆಯಲ್ಲಿ ಮತ್ತೆ(ಮೂಢ)ನಂಬಿಕೆಯಿಂದ ಜನ ಮಳೆಗಾಗಿ ಏನೆಲ್ಲ ಮಾಡುತ್ತಾರೆ? ಮಳೆಗೊಂದು ಆಚರಣೆ ಅದೆಷ್ಟು ಫಲಪ್ರದ? ಸುರಿದೀತೆ ಭುವಿಗೆ ಮಳೆ?
ಹಸಿರುಟ್ಟೀತೆ? ಹಸನಾದೀತೆ ಬದುಕು?

‘ಭರಣಿ ಸುರಿದ್ರೆ ಭರಗಾಲ್ದ ಭಯವಿಲ್ಲ’, ‘ಭರಣಿ ಹುಯ್‌ದ್ರೆ ಧರಣಿ ತುಂಬ ಬೆಳೆ’ ಹೀಗೆ ಮೊದಲ ಮಳೆಯ ಕುರಿತು ಬಗೆ ಬಗೆಯ ಗಾದೆ ಮಾತುಗಳಿವೆ. ನಂಬಿಕೆಗಳಿವೆ. ಆ ಮೊದಲ ಮಳೆ ಸುರಿಯದೇ ಇದ್ದಾಗ ರೈತ, ಜನ ಕಂಗೆಡುತ್ತಾರೆ. ಮಳೆಗಾಗಿ ವಿವಿಧ ಆಚರಣೆಗೆ ಮುಂದಾಗುತ್ತಾರೆ.
ಚೈತ್ರ ಮಾಸದಿಂದ ಕಾರ್ತಿಕ ಮಾಸದ ವರೆಗಿನ ಮಳೆ ನಕ್ಷತ್ರಗಳ ಮೇಲೆ ಹೆಚ್ಚು ನಂಬಿಕೆಗಳು, ಆಚರಣೆಗಳು ಕೇಂದ್ರೀಕೃತವಾಗಿದೆ. ಅಶ್ವಿನಿ, ಭರಣಿಯಿಂದ ಮಘಾ ನಕ್ಷತ್ರದ ವರೆಗೆ ಮಳೆ ಸುರಿಯುತ್ತದೆ ಎಂಬ ವಾಡಿಕೆ.
ಇದಕ್ಕೆ ಜನಪದ ಎನ್ನಿ. ಧಾರ್ಮಿಕ ಅಥವಾ ನಂಬಿಕೆ, ಮೂಢ ನಂಬಿಕೆ ಎಂದೇ ಕರೆದುಕೊಳ್ಳಿ. ಮಳೆಗಾಗಿ ರೈತರಲ್ಲಿ, ಬುಡಕಟ್ಟು ಜನಾಂಗದವರಲ್ಲಿ ವೈವಿಧ್ಯಮಯ ಆಚರಣೆ ಇದೆ. ಭಕ್ತಿ, ಕಳಕಳಿ ಇದೆ. ಜೀವಜಲಕ್ಕಾಗಿ ಸಲ್ಲಿಸುವ ಪ್ರಾರ್ಥನೆ, ಆಚರಣೆ ಆಶ್ಚರ್ಯವನ್ನೂ ಹುಟ್ಟಿಸುತ್ತದೆ. ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಗ್ರೀಕ್, ರೋಮನ್ ಕಾಲದಿಂದ ಇಂದಿನ ವರೆಗೂ ಮಳೆಯ ಕುರಿತ ಆಚರಣೆಗಳು ಪ್ರಚಲಿತದಲ್ಲಿದೆ. ಆಫ್ರಿಕಾದ ಬುಡಕಟ್ಟು, ಚೀನಾದ ರೈತರೂ ನಮ್ಮಂತೆ ಇಂದಿಗೂ ಮಳೆಯ ಕುರಿತು ಯಂತೆಂಥದೋ ಆಚರಣೆ ಮಾಡುತ್ತಾರೆ. ಆದರೆ ಧರೆಗೆ ಸುರಿವ ಮಳೆಮಾತ್ರ ತನಗೆ ಯಾವುದೂ ಸಂಬಂಧ ಇಲ್ಲ ಎಂಬಂತೆ ಸುರಿದು ಬಿಡುತ್ತದೆ. ಮೊದಲ ಮಳೆಯೇ ಕೆರೆ ಒಡ್ಡು ಒಡೆಯುವಷ್ಟು, ನಾಲ್ಕಾರು ಜನರ ಸಾವಿಗೆ ಕಾರಣವಾಗುವಷ್ಟು ಸುರಿದು ಬಿಡುತ್ತದೆ. ಮುಂಗಾರು ಚೆನ್ನಾಗಿ ಸುರಿಯಿತೆಂದು ಬೀಜ ಬಿತ್ತಿದರೆ, ಮೊಳಕೆ ಒಣಗಿ, ಜೀವನ ಕಳೆದುಕೊಳ್ಳುವಂತ ಸಂಕೀರ್ಣ ಸ್ಥಿತಿಯೂ ಇಂದಿದೆ. ಆದರೆ ಆಚರಣೆ ಬಿಟ್ಟೀವೆ ನಾವು? ಮಳೆ ಬೇಡವೆಂದು ಕೈಕಟ್ಟಿ ಕುಳಿತಾರೆಯೇ ರೈತರು? ಮಳೆ ದೇವನ ನೆನೆಯದೇ ಕೃಷಿ ಹಸನಾದೀತೆ?
ಬಿಸಿಲು ಮಳೆ, ಮಂಗನ ಮದುವೆ
ಇರುವೆ ದಿಬ್ಬಣ, ಚೋರಟೆ ಚಕ್ಕುಲಿ
ನಂಜುಳೆ ಪಾಯ್ಸ

ಮಳೆಗಾಗಿ ಹೀಗೆ ಹಾಡಿ ಕುಣಿವ ಮಕ್ಕಳಾದಿಯಾಗಿ ಎಲ್ಲರಲ್ಲೂ ಮಳೆಯ ಕುರಿತು ಒಂದೊಂದು ಕಲ್ಪನೆಇದೆ.
ಟಿ ಏನೆಲ್ಲ ಆಚರಣೆಗಳು:ಕದಂಬರ ನಾಡು, ಬನವಾಸಿಯ ಆದಿ ಮಧುಕೇಶ್ವರ ದೇವರ ಪರ್ಜನ್ಯ ಸುತ್ತಮುತ್ತಲಿನ ನಾಡಿಗೆಲ್ಲ ಪರಿಚಿತ. ಇಲ್ಲಿನದು ಭಕ್ತಿ ಪ್ರಧಾನ ಕಾರ್‍ಯ. ಸಂಕಲ್ಪಮಾಡಿ ಮಧುಕೇಶ್ವರ ಲಿಂಗವನ್ನು ಪೂರ್ತಿ ನೀರಲ್ಲಿ ಮುಳುಗಿಸಿ ಮಳೆ- ಬೆಳೆ ಪಡೆಯುವ ಸಂಪ್ರದಾಯ. ಗರ್ಭಗುಡಿಯೊಳಗೆ ವಶಿಷ್ಟ ತೀರ್ಥದ ನೀರು ತುಂಬುತ್ತಾರೆ. ಲಿಂಗ ಮುಳುಗಿ ಮೇಲ್ಬಾಗದಲ್ಲಿ ಕನಿಷ್ಟ ಮೂರು ಇಂಚು ನೀರು ನಿಲ್ಲಿಸುತ್ತಾರೆ. ಬಳಿಕದ ೨೪ ಗಂಟೆಯಲ್ಲಿ ಮಳೆ ಸುರಿಯುತ್ತದೆ. ಈಗ ಎರಡು ವರ್ಷದ ಹಿಂದೆ ಪರ್ಜನ್ಯ ಮಾಡಲಾಗಿತ್ತು.
ಟಿ ನರ್ತನ, ಹಾಡು, ಮದುವೆ :ಮಳೆಗಾಗಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ, ಗೊಂಡ ಜನಾಂಗದವರು ನರ್ತಿಸುತ್ತಾರೆ. ಅದು ತಾರ್ಲೆ ಕುಣಿತ. ಮಳೆಗಾಗಿ ಹಾರೈಸುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ಹೊಲದಲ್ಲಿ ಮಳೆಗಾಗಿ ನರ್ತಿಸುತ್ತಾರೆ. ಬೆದ್ರಂಡೆ ಹೊನ್ನಾವರ ಭಾಗದ ಆಚರಣೆ. ಹೊಲದಲ್ಲೇ ನರ್ತಿಸುತ್ತಾರೆ. ಬಳಿಕ ಸಾಂಕೇತಿಕವಾಗಿ ಮದುವೆ ಮಾಡುತ್ತಾರೆ. ತಾರ್ಲೆ ಮತ್ತು ಬೆದ್ರಂಡೆ ಕುಣಿತಕ್ಕೆ ಪಧ್ಯಗಳೂ ಇವೆ. ಲಂಬಾಣಿ ಜನಾಂಗದವರು ಮಳೆರಾಜನ ಕುಣಿತ ಮಳೆಗಾಗಿಯೇ ಇದೆ. ಈ ಹಾಡು ಹಾಡಿ ಕುಣಿದರೆ ಮಳೆಯಾಗುತ್ತದೆ ಎಂಬ ನಂಬಿಕೆ.
ಮಳೆಯ ಪ್ರತೀಕವಾದ ಕಪ್ಪೆಯನ್ನು ಕತ್ತೆಯ ಮೇಲೆ ಕುಳಿಸಿ ಊರತುಂಬಾ ಮೆರವಣಿಗೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಮಳೆರಾಯ ಮತ್ತು ಕಪ್ಪೆಯ ಸಂಬಂಧ ಗಾಢವಾಗಿಯೇ ಇದೆ. ಉತ್ತರ ಕರ್ನಾಟಕದಲ್ಲೆಲ್ಲ ಮಳೆಗಾಗಿ ಆಚರಿಸುವ ಜೋಕುಮಾರ ಆಚರಣೆ ಬಲು ಪ್ರಸಿದ್ಧ. ಮಳೆಗಾಗಿ ಸಾಮೂಹಿಕ ಸಂತರ್ಪಣೆ ಮಾಡುವುದು, ವಿರಾಟಪರ್ವ ಓದಿಸುವುದೂ ಇದೆ. ಜೀವಂತ ಕಪ್ಪೆಯನ್ನು ಬಟ್ಟೆಯಲ್ಲಿ ಕಟ್ಟಿ ಒನಕೆಯ ತುದಿಗೆ ಕಟ್ಟುತ್ತಾರೆ. ಅದನ್ನು ಹಿಡಿದುಕೊಂಡು ಊರಿನ ತುಂಬಾ ಸುತ್ತುವುದು ಹಾಸನ ಪ್ರದೇಶದಲ್ಲಿರುವ ರೂಢಿ. ಜನರೆಲ್ಲ ಸೇರಿ ಮೆರವಣಿಗೆ ಹೊರಟು ಊರ ಹೊರಗಿನ ಪ್ರದೇಶದಲ್ಲಿ ಗುಂಡಿ ತೋಡುತ್ತಾರೆ. ಅಲ್ಲಿ ಸಿಪ್ಪೆ ಸಹಿತ ತೆಂಗಿನ ಕಾಯಿ ಹೂತರೆ ಮಳೆ ಬರುತ್ತದೆ ಎಂಬ ನಂಬಿಕೆಯೂ ಹಾಸನ ಕಡೆಯಿದೆ. ಕತ್ತೆ, ಕಪ್ಪೆ ವಿವಾಹ ಮಾಡುವ ಕ್ರಮ ಕೊಪ್ಪಳ ಸೇರಿದಂತೆ ಹಲವೆಡೆ ಪ್ರಚಲಿತದಲ್ಲಿದೆ.
ಮಳೆಗಾಗಿ ಬೋರ್ಗಲ್ಲಿಗೆ ನೀರು ಹಾಕುವ ಪರಂಪರೆ ಹಾವೇರಿ ಜಿಲ್ಲೆ ದೇವರಗುಡ್ಡದಲ್ಲಿದೆ. ಮೊನ್ನೆಯಷ್ಟೇ ಹುಯ್ಯೋ ಹುಯ್ಯೋ ಮಳೆರಾಯ ಎಂದು ಮಳೆರಾಯನಿಗೆ ಮೊರೆಇಟ್ಟಿದ್ದಾರೆ ಅಲ್ಲಿನ ಜನ. ಬೋರ್ಗಲ್ಲಿಗೆ ಹಾಕಿದ ನೀರು ಪೂರ್ವ ದಿಕ್ಕಿಗೆ ಹರಿಯಬೇಕು ಎಂಬ ನಂಬಿಕೆ. ೧೦೧ ಪುರುಷರು ಒದ್ದೆ ಬಟ್ಟೆಯಲ್ಲಿ ನೀರು ಹಾಕಿದರೆ, ೫ ವರ್ಷದೊಳಗಿನ ೫ ಬಾಲಕರು ಬೆತ್ತಲೆಯಾಗಿ ಕೊಡದಲ್ಲಿ ನೀರು ಹೊತ್ತು ಬೋರ್ಗಲ್ಲಿಗೆ ಹಾಕುತ್ತಾರೆ.
ಕ್ರೌರ್‍ಯವೆನ್ನೋಣವೇ?:ಮಳೆಗಾಗಿ ಕೆಲವು ಕ್ರೂರ ಕ್ರಮಗಳೂ ಇದೆ ಎಂಬುದು ಗಮನಾರ್ಹ. ತಾಳ್ಮೆ ಕಳೆದುಕೊಂಡು ವಿಚಿತ್ರ ಎನಿಸುವ ಆಚರಣೆಗಳು ಆಚರಿಸಲ್ಪಡುತ್ತವೆ. ಜೀವಂತ ಹಂದಿಯನ್ನು ಕುತ್ತಿಗೆ ವರೆಗೆ ಹುಗಿದು, ಅದಕ್ಕೆ ಆಹಾರ- ನೀರು ಕೊಡದೆ ಕಿರುಚಾಡಿ ಸಾಯುವಂತೆ ಮಾಡುವ ಕ್ರಮವೂ ನಮ್ಮಲ್ಲಿದೆ. ಮಳೆ ದೇವರನ್ನು ಬೈಯುವ, ಮಳೆಯ ಪ್ರತೀಕವಾದ ಕಪ್ಪೆಯನ್ನು ಬಿಸಿಲಿನಲ್ಲಿಟ್ಟು ಹಿಂಸಿಸುವ ಪದ್ಧತಿಯೂ ಇದೆ. ಕೆರೆಕಟ್ಟೆಯ ಮೇಲಿರುವ ದುಗ್ಗಮ್ಮ ದೇವರಿಗೆ ಕೋಲಾರದ ಕಡೆ ಕಲ್ಲು ಬೀರುತ್ತಾರೆ. ಜೋಕುಮಾರನ ವಿಗ್ರಹಕ್ಕೆ ಕೀಟ, ಹುಳುಗಳನ್ನು ಬಿಡುವುದೂ ನಮ್ಮವರಿಗೆ ಗೊತ್ತಿದೆ.
ಕುಮಟಾ ತಾಲೂಕಿನ ಧಾರೇಶ್ವರದಲ್ಲಿ ಮಳೆಗಾಗಿ ಮಾಡುವ ಆಚರಣೆ ಭಿನ್ನ, ಕಠಿಣ ಅಷ್ಟೇ ಘೋರವಾದದ್ದು. ಮಳೆ ಬರದೆ ಬರದ ಸ್ಥಿತಿ ಬಂದಾಗ, ಕೆರೆಯಲ್ಲಿರುವ ಈಶ್ವರ ಲಿಂಗವನ್ನು ರಥ ಬೀದಿಗೆ ತಂದಿಡುತ್ತಾರೆ. ಮೆಣಸಿನ ಕಾಯಿಯನ್ನು ನುಣ್ಣಗೆ ನುರಿದು ದೇವರ ಕಣ್ಣಿಗೆ ಹಚ್ಚುತ್ತಾರೆ. ತಲೆತಲಾಂತರದಿಂದ ಇರುವ ಈ ಆಚರಣೆಯನ್ನು ಮೂರು ವರ್ಷದ ಹಿಂದೆ ಮಾಡಿದ್ದರು. ಲಿಂಗಕ್ಕೆ ಮೆಣಸಿನ ಖಾರಾ ಹಚ್ಚಿ ಮೂರು ದಿನ ಇಟ್ಟಿದ್ದರು.
ಇದೊಂದು ವಿಚಿತ್ರ ಸಂಪ್ರದಾಯ. ಓದಿ ಬೈದುಕೊಳ್ಳಬೇಡಿ. ಉತ್ತರ ಕರ್ನಾಟಕ ಮತ್ತು ಮಲೆ ನಾಡಿನ ಕೆಲವೆಡೆಯೂ ಇದು ಇದೆ. ಜೂನ್ ಎರಡನೇ ವಾರ ಹಾವೇರಿ ಜಿಲ್ಲೆಯ ದೂದಿಹಳ್ಳಿಯಲ್ಲಿ ಇದನ್ನು ಆಚರಿಸಿದ್ದು ಲೇಟೆಸ್ಟ್ ಇವೆಂಟ್. ಹೂತಿರುವ ಶವಕ್ಕೆ ದೇವರ ಹೆಸರಲ್ಲಿ ಸುಣ್ಣದ ನೀರು ಬಿಟ್ಟರೆ ಮಳೆಯಾಗುತ್ತದೆ ಎಂಬುದು ಒಂಥರಾ ನಂಬಿಕೆ. ಹಿಂದಿನಿಂದ ಬಂದದ್ದನ್ನೇ ತಾವೂ ಮಾಡಿದ್ದೇವೆ ಎಂದು ಹೆಣಕ್ಕೆ ಸುಣ್ಣದ ನೀರು ಬಿಟ್ಟ ದೂದಿಹಳ್ಳಿ ಜನ ಹೇಳಿಕೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ಬೀರಪ್ಪ ದೇವರನ್ನು ಕುಳಿಸಿಕೊಂಡು ಒಂದಷ್ಟು ಜನರು ಸ್ಮಶಾನಕ್ಕೆ ತೆರಳಿದರು. ಹೆಣ ಹೂತಲ್ಲಿ ಅಗೆದು ತಲೆಬುರುಡೆಗೆ ಸುಣ್ಣದ ನೀರು ಬಿಟ್ಟರು. ಆದರೆ ಬಳಿಕದ ಒಂದೆರಡು ದಿನದಲ್ಲೂ ಮಳೆ ಮಾತ್ರ ಸುರಿಯಲಿಲ್ಲ! ತೊನ್ನು ಇರುವರು ಮೃತಪಟ್ಟಾಗ ಅವರ ಶವವನ್ನು ಹೂತರೆ ಸುತ್ತಲಿನ ಊರಲ್ಲಿ ಮಳೆಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಅಂತಹ ಶವವನ್ನು ಸುಡುವ ಅಥವಾ ಶವ ಹೂಳುವಾಗ ಉಪ್ಪು ಹಾಕಿ ಹೂಳುವ ನಂಬಿಕೆಯೂ ಇದೆ.
ಹಿಂದೂ ವೇದ, ಪುರಾಣದಲ್ಲಿ ವರುಣ ದೇವ ಮಳೆಯ ಅಧಿಪತಿ. ಸಿಡಿಲು- ಮಳೆಯ ಸೃಷ್ಠಿಗೆ ಈ ದೇವರೇ ಕಾರಣ. ಪರ್ಜನ್ಯ -ಮಳೆಗೆ ಕಾರಣವಾದ ಒಂದು ಯಜ್ಞ. ವರುಣ ಸೂಕ್ತವನ್ನು ಪಠಿಸಿ ಮಳೆಗೆ ಪ್ರಾರ್ಥಿಸಲಾಗುತ್ತದೆ. ಮಳೆಗಾಗಿ ವರುಣದೇವರನ್ನು ಪ್ರಾರ್ಥಿಸುವ ಶ್ಲೋಕ ಹೀಗಿದೆ:
ಯತ್ಕಿಂಚೇದಂ ವರುಣ
ದೈವೇ ಜನೇಧಿ ದ್ರೋಹಂ ಮನುಷ್ಯಾ ಶ್ಚರಾಮತಿ
ಅಚಿತ್ತಿ ಯತ್ತವ ಧರ್ಮಾ ಯುಯೋಪಿಮ ನಸ್ತಸ್ಮದೇನಸೋ ದೇವ ರೀರಿಷಹಾ
ಅಂದರೆ:ಎಲ್ಲರಿಂದಲೂ ಸ್ತುತಿಸಲ್ಪಡುವ ಹೇ ವರುಣ ಭಗವಂತನೆ, ಮನುಷ್ಯರಾದ ನಾವು ದೇವ ಸಮಾನರಾದ ಜನಗಳಲ್ಲಿ ತಿಳಿದೋ, ತಿಳಿಯದೆಯೋ ಮಾಡಿದ ಹಿಂಸಾ ಜನಕವಾದ ಕಾರ್‍ಯವನ್ನು ಆಭಿಚಾರಿಕ ಕ್ರಿಯೆಗಳ ಮೂಲಕ ಮಾಡಿದ್ದೇವೆಯೋ ಹಾಗೆಯೇ ಏಕಾಗ್ರತೆ ಇಲ್ಲದೆ ಪ್ರಮಾಧದಿಂದ ನಿನಗೆ ಪ್ರೀತಿಯುಂಟುಮಾಡುವ ಕಾರ್‍ಯಗಳನ್ನು ನಾಶಮಾಡಿದ್ದೇವೆಯೋ, ಅದರಿಂದುಂಟಾದ ಪಾಪಸಮೂಹಗಳನ್ನು ಕಾರಣವಾಗಿಟ್ಟುಕೊಂಡು ನಿನ್ನ ಆರಾಧಕರಾದ ನಮ್ಮನ್ನು ಹಿಂಸಿಸದೆ ವೃಷ್ಠಿಯನ್ನುಂಟುಮಾಡು.
‘ಕಾರಿರೀಷ್ಟಿ’ ಎಂಬ ಯಜ್ಞ ಮಳೆಗಾಗಿಯೇ ಇದೆ. ಮಳೆಗೆ ಉಂಟಾದ ಪ್ರತಿಬಂಧಕ ನಿವಾರಣೆಯನ್ನು ಈ ಯಜ್ಞದಿಂದ ಮಾಡುತ್ತಾರೆ. ಇವೆಲ್ಲ ಪುರಾಣ, ಜಾನಪದ, ನಂಬಿಕೆ ಎಂದೆಲ್ಲ ಹೇಳಬಹುದು. ಈಗ ಏನಿದ್ದರೂ ವಿಜ್ಞಾನ, ಕಂಪ್ಯೂಟರ್ ತಾಂತ್ರಿಕತೆಯದ್ದೇ ಮೇಲುಗೈ. ಮಳೆಗಾಗಿ ಮೋಡ ಬಿತ್ತನೆಯ ಕಾಲ. ವಿಮಾನದಲ್ಲಿ ಭಾನಿಗೆ ತೆರಳಿ ಕಪ್ಪು ಮೋಡದ ಮೇಲೆ ರಾಸಾಯನಿಕ ಸಿಂಪಡಣೆ. ಆ ಮೂಲಕ ಮೋಡ ತಂಪುಗೊಳಿಸಿ ಭೂಮಿಗೆ ಗಂಗೆ ಇಳಿಸುವ ತಂತ್ರಜ್ಞಾನ. ಜಾನಪದ, ಪರ್ಜನ್ಯಕ್ಕಿಂತ ಲಕ್ಷಾಂತರ ರು. ವೆಚ್ಚ ಮಾಡಿ ಮಳೆ ಸುರಿಸುವ, ಧರೆಗೆ ಇಳಿಸುವ ಕಾರ್‍ಯದ್ದೇ ಕಾರುಬಾರು. ಕಳೆದ ಎರಡು ವರ್ಷದ ಹಿಂದೆ ರಾಜ್ಯ ಮಳೆಯ ಅಭಾವ ಕಂಡಾಗ ಸರ್ಕಾರ ಇದನ್ನೇ ಮಾಡಿತ್ತು. ಮೋಡ ಭಿತ್ತನೆ ಯೋಜನೆ ಪ್ಲಾಪ್ ಆಯಿತು. ಲಕ್ಷಾಂತರ ರು. ನೀರಿನಲ್ಲಿ ತೇಲಿ ಬಿಟ್ಟಂತಾಯಿತು.