Saturday, August 8, 2009

ಟ್ರ್ಯಾಕ್ ಮತ್ತು ದೂಧ ಸಾಗರ್















































Tuesday, July 28, 2009

ತ್ರಿ ಧರ್ಮೀಯ ಸಿದ್ದಿಯರು

ಪರ ನೆಲದ ಬುಡಕಟ್ಟು ಜನಾಂಗವೊಂದು ತಮ್ಮ ಅರಣ್ಯ ಪ್ರದೇಶದಲ್ಲಿ ಶತ ಶತಮಾನಗಳಿಂದ ನೆಲೆಯೂರಿ ಭಾರತೀಯ ನಾಗರಿಕರಾಗಿದ್ದಾರೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಇಲ್ಲಿಗೆ ಬಂದ ಅವರು ಧಾರ್ಮಿಕ ನೆಲೆ ಹುಡುಕಿ- ಕಟ್ಟಿಕೊಂಡಿದ್ದಾರೆ. ಒಂದೇ ಮೂಲ, ನೆಲದ ಅವರು ಜೀವನದ ಪಯಣದಲ್ಲಿ ತಮ್ಮದಲ್ಲದ ಧರ್ಮ ಸ್ವೀಕರಿಸಿ ತ್ರಿ ಧರ್ಮ ಅನುಯಾಯಿಗಳಾಗಿದ್ದಾರೆ. ಕಾಲ ಎಷ್ಟೇ ಗತಿಸಿದರೂ ಅವರು ನಮ್ಮ ನಡುವೆ ನಿಗ್ರೋ ಗುಣಗಳಿಂದ ಗುರುತಿಸಿಕೊಳ್ಳುತ್ತಾರೆ. ಗುಲಾಮಗಿರಿಯಿಂದ ಮುಕ್ತರಾಗಿ, ಸರ್ವ ವಿಭಿನ್ನತೆ ಮೀರಿ ಸ್ವಾತಂತ್ರ್ಯ ಕಂಡುಕೊಂಡಿದ್ದಾರೆ. ಹಿಂದೂ, ಕ್ರಿಶ್ಚಿಯನ್ ಅಥವಾ ಮುಸ್ಲಿಂ ಆಗಿದ್ದಾಗಲೂ ಧರ್ಮದ ರೇಖೆ ದಾಟಿ ತಾವು ಸಿದ್ದಿ ಜನ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.


ಸರ್ವ ಧರ್ಮ ಸಮನ್ವಯ ಸಿದ್ದಾಂತಕ್ಕೆ ಸಿದ್ದಿ ಜನಾಂಗ ಒಂದು ನಿದರ್ಶನ. ವ್ಯಾಪಾರಿಗಳ ಕೈಗೆ ಸಿಕ್ಕಿ ಲಕ್ಷಾಂತರ ಮೈಲಿ ದೂರ ಬಂದ ನಿಗ್ರೋ ಜನ ಸ್ಥಳೀಯತೆ ಮೈಗೂಡಿಸಿಕೊಂಡು, ಇಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಮೂಲ ಸಂಸ್ಕೃತಿ, ಸಾಮಾಜಿಕ ವೈಶಿಷ್ಟತೆ ಮರೆತು ಸ್ಥಳೀಯರಲ್ಲಿ ಬೆರೆತಿದ್ದಾರೆ.
ಶತ ಶತಮಾನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ, ಹಳಿಯಾಳ, ಮುಂಡಗೋಡು ಮತ್ತು ಅಂಕೋಲಾ ತಾಲೂಕಿನಲ್ಲಿ ನೆಲೆ ಕಂಡುಕೊಂಡ ನಿಗ್ರೋ ಮೂಲದ ಸಿದ್ದಿಗಳು ಇಂದು ತ್ರಿ ಧರ್ಮಿಯರು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಸೇರಿದ್ದಾರೆ ಈ ಬುಡಕಟ್ಟು ಜನ.
ಸಿದ್ದಿಯರಿಗೆ ಮೂಲ ಧರ್ಮ ಇತಿಹಾಸ ಗೊತ್ತಿಲ್ಲ. ಈ ಬುಡಕಟ್ಟಿನಲ್ಲಿ ಇಂದು ಮೂರು ಧರ್ಮಗಳು ಸಮ್ಮಿಲಿತಗೊಂಡಿವೆ. ಧರ್ಮ ಸ್ವೀಕರಣೆಯಿಂದ ಬರುವುದೋ ಅಥವಾ ಪಾರಂಪರಿಕವಾಗಿ ಬರುವುದೋ ಎಂಬ ತರ್ಕಕ್ಕೆ ಸಿದ್ದಿಯರ ಧರ್ಮ ಸ್ವೀಕರಣೆ ಒಂದು ಚರ್ಚಾವಸ್ತು. ಸ್ಥಳೀಯರ ಸಂಪರ್ಕ, ಪ್ರಭಾವದಿಂದ ತ್ರಿ ಧರ್ಮ ಸ್ವೀಕಾರವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಬುಡಕಟ್ಟು ಜನಾಂಗವೊಂದರಲ್ಲಿ ಜಾತ್ಯತೀತ ವ್ಯವಸ್ಥೆ ಕಾಣಬೇಕಾದರೆ ಅದು ಸಿದ್ದಿ ಜನಾಂಗದಲ್ಲಿ ಮಾತ್ರ.
  • ಮೂಲ:ಬಲಾಢ್ಯ ದೇಹ, ಕಪ್ಪು ಮೈಬಣ್ಣ. ಗುಂಗುರು ಕೂದಲು, ದಪ್ಪ ತುಟಿ, ಮೊಂಡು ಮೂಗು ಇರುವ ನಿಗ್ರೋ ಸಂತತಿಯ ಜನ ಆಫ್ರಿಕಾ ಮೂಲದವರು ಎಂಬುದು ನಿರ್ವಿವಾದಿತ. ಭಾರತಕ್ಕೆ ನಿಗ್ರೋ(ಸಿದ್ದಿ)ಗಳು ಬಂದ ಕುರಿತು ಹಲವು ಭಿನ್ನಾಭಿಪ್ರಾಯಗಳಿವೆ. ಅರಬರು, ಪೋರ್ಚುಗೀಸರು ಆಫ್ರಿಕಾ ಮೂಲದ ನಿಗ್ರೋ ಸಂತತಿಯ ಜನರನ್ನು ಭಾರತಕ್ಕೆ ಕರೆತಂದದ್ದು ಇತಿಹಾಸ. ೧೫ ರಿಂದ ೧೬ನೇ ಶತಮಾನದ ಅವಧಿಯಲ್ಲಿ ಅರಬರು ಮತ್ತು ಪೋರ್ಚುಗೀಸರು ಆಫ್ರಿಕಾ ಜನರನ್ನು(ಕರಿಯರನ್ನು) ಭಾರತಕ್ಕೆ ತಂದು ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿ ತಮ್ಮ ಗುಲಾಮರನ್ನಾಗಿ ಇಟ್ಟುಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ. ಬಲಾಢ್ಯವಾಗಿರುವ ಸಿದ್ದಿ ಜನರ ಕೆಲಸ ಮಾಡುವ ಸಾಮರ್ಥ್ಯ ಅರಬರು, ಪೋರ್ಚುಗೀಸರನ್ನು ಆಕರ್ಷಿಸಿತ್ತು.
    ಇಂದು ಕರ್ನಾಟಕ, ಗುಜರಾತ್, ಗೋವಾ, ಡಯೂ ಮತ್ತು ಆಂಧ್ರದಲ್ಲೂ ಸಿದ್ದಿ ಜನರಿದ್ದಾರೆ. ಮಹಾರಾಷ್ಟ್ರದಲ್ಲಿ ಇವರನ್ನು ಹಾಬ್ಸಿಸ್, ಗೋವಾದಲ್ಲಿ ಕಾಪಿರ್‍ಸ್ ಎಂದು ಈ ಜನರನ್ನು ಕರೆಯುತ್ತಾರೆ. ಕರ್ನಾಟಕದಲ್ಲಿ ಸಿದ್ದಿಗಳು ವಾಸವಾಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ. ೨೦೦೧ರ ಗಣತಿಯ ಪ್ರಕಾರ ಒಟ್ಟು ೧೪,೦೭೨ ಸಿದ್ದಿ ಜನರಿದ್ದಾರೆ. ಇದು ತ್ರಿ ಧರ್ಮೀಯ ಸಿದ್ದಿ ಜನಸಂಖ್ಯೆ. ಇವರಲ್ಲಿ ಶೇ.೫೦ರಷ್ಟು ಸಿದ್ದಿಯರು ಹಿಂದೂ ಧರ್ಮೀಯರು ಎಂಬುದು ಒಂದು ಅಂದಾಜು. ಮುಂಡಗೋಡು ಮತ್ತು ಹಳಿಯಾಳ ತಾಲೂಕಿನಲ್ಲಿ ಕ್ರಿಶ್ಚಿಯನ್ ಸಿದ್ದಿಯರು ಹೆಚ್ಚಿದ್ದರೆ, ಅಂಕೋಲಾ, ಯಲ್ಲಾಪುರ ಮತ್ತು ಶಿರಸಿ ತಾಲೂಕಿನಲ್ಲಿ ಹಿಂದೂ ಸಿದ್ದಿ ಜನ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.
    ಭಾರತಕ್ಕೆ ಬಂದು ಶತ- ಶತಮಾನಗಳು ಗತಿಸಿದ ಮೇಲೆ (ನಿಗ್ರೋ ಜನರು) ಸಿದ್ದಿಯರು ಗುಲಾಮಗಿರಿಯ ದಾಸ್ಯದಿಂದ ಮುಕ್ತರಾದರು. ಕಾಡು ಸೇರಿ ಸ್ವತಂತ್ರ ಜೀವನ ಆರಂಭಿಸಿದರು. ಕೂಲಿ ಮಾಡಿ ಕಾಳು ಗಿಟ್ಟಿಸಿದರು. ಅಲ್ಪ ಸ್ವಲ್ಪ ಕೃಷಿಯನ್ನೂ ಕಲಿತು, ಕೈಗೊಂಡರು. ಇಂದು ಭಾಗಶಃ ಸಿದ್ದಿಗಳು ಕೃಷಿಕರು ಅಥವಾ ಕೃಷಿ ಕಾರ್ಮಿಕರು. ಹಿಂದೂ ಮತ್ತು ಕ್ರಿಶ್ಚಿಯನ್ ಸಿದ್ದಿಗಳು ಕನ್ನಡ, ಕೊಂಕಣಿ ಮಾತನಾಡುತ್ತಾರೆ. ಮುಸ್ಲಿಂ ಸಿದ್ದಿಗಳು ಉರ್ದು ಮಾತನಾಡುತ್ತಾರೆ.
    ಮದುವೆಯ ಬಂಧನ:ಸಾಮಾನ್ಯವಾಗಿ ಜನಾಂಗ, ಜಾತಿಯ ಜನರ ನಡುವೆ ಮದುವೆ ಸಂಬಂಧ ಏರ್ಪಡುತ್ತದೆ. ಸಿದ್ದಿಗರಲ್ಲಿ ಬೇರೆಯದೇ ಸ್ಥಿತಿ. ಒಂದೇ ಬುಡಕಟ್ಟು ಜನಾಂಗವಾಗಿದ್ದರೂ ಇಲ್ಲಿ ಧರ್ಮ ಬೇರೆ ಬೇರೆ. ದಶಕಗಳ ಹಿಂದೆ ಮೂರು ಧರ್ಮೀಯ ಸಿದ್ದಿಯರಲ್ಲೂ ಪರಸ್ಪರ ಮದುವೆ ನಡೆಯುತ್ತಿತ್ತು. ಈಗ ಮುಸ್ಲಿಂ ಸಿದ್ದಿಯರು ಹಿಂದೂ, ಕ್ರಿಶ್ಚಿಯನ್ ಸಿದ್ದಿಯರೊಂದಿಗೆ ಮದುವೆ ಸಂಬಂಧ ಮಾಡುವುದಿಲ್ಲ. ಕ್ರಿಶ್ಚಿಯನ್ ಮತ್ತು ಹಿಂದೂ ಸಿದ್ದಿಯರಲ್ಲಿ ಮದುವೆ ಸಂಬಂಧ ಇತ್ತೀಚಿನ ದಶಕದಲ್ಲಿ ನಡೆಯುತ್ತಿದೆ. ಈ ಮೊದಲು ಹಿಂದೂ- ಕ್ರಿಶ್ಚಿಯನ್ ಸಿದ್ದಿಯರಲ್ಲಿ ಮದುವೆ ಆದಾಗ ಗಂಡಿನ ಮನೆಯ ಧರ್ಮಕ್ಕೆ ಹೆಣ್ಣು ಸೇರುವುದು ಸಾಮಾನ್ಯವಾಗಿತ್ತು. ಆದರೆ ಈಗ ಗಂಡಾಗಲಿ, ಹೆಣ್ಣಾಗಲಿ ಹಿಂದೂ- ಕ್ರಿಶ್ಚಿಯನ್ ಮದುವೆಯಲ್ಲಿ ಇಬ್ಬರೂ ಕ್ರಿಶ್ಚಿಯನ್ ಧರ್ಮವನ್ನೇ ಸ್ವೀಕರಿಸುವುದು.
    ಸಿದ್ದಿಗಳೂ ಮೂರು ಧರ್ಮದಲ್ಲಿದ್ದರೂ ಆಯಾ ಧರ್ಮದ ಜನ ಸಿದ್ದಿಯರ ಜತೆ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ಸಿದ್ದಿಗಳಲ್ಲೇ ವಿವಾಹ ಸಂಬಂಧ ನಡೆಯುವುದು. ಇತರರ ಸಿದ್ದಿಯರ ಜತೆ ವೈವಾಹಿಕ ಸಂಬಂಧ ಕೈಗೊಳ್ಳದೇ ಇರುವುದಕ್ಕೆ ದೈಹಿಕ ಗುಣಲಕ್ಷಣ ಪ್ರಮುಖ ಕಾರಣ ಎಂಬ ಅನಿಸಿಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಬುಡಕಟ್ಟು ಅಧ್ಯಯನ ಪೀಠದ ಹಿ.ಚಿ.ಬೋರಲಿಂಗಯ್ಯ ಅವರದು.
    ಕ್ರಿಶ್ಚಿಯನ್ ಸಿದ್ದಿಗಳೊಂದಿಗೆ ಕ್ರಿಶ್ಚಿಯನ್ ಧರ್ಮದ ಇತರರು ವೈವಾಹಿಕ ಸಂಬಂಧ ನಡೆಸುವುದಿಲ್ಲ. ಹಿಂದೂ, ಮುಸ್ಲಿಂ ಸಿದ್ದಿಗಳಲ್ಲೂ ಇದೇ ಸ್ಥಿತಿ. ತ್ರಿ ಧರ್ಮದ ಸಿದ್ಧಿಗಳಲ್ಲೇ ವೈವಾಹಿಕ ಸಂಬಂಧ ಏರ್ಪಡುವುದು ಎನ್ನುತ್ತಾರೆ ಲಾರೆನ್ಸ್ ಸಿದ್ದಿ.
  • ತ್ರಿ ಧರ್ಮೀಯರಾದದ್ದು ಹೇಗೆ?: ಸಿದ್ದಿಗಳು ಮೂರು ಧರ್ಮ ಸ್ವೀಕರಿಸಿದ್ದು ನಿಖರವಾಗಿ, ದಾಖಲೆಯ ರೂಪದಲ್ಲಿಲ್ಲವಾದರೂ, ಅಧ್ಯಯನ ಆಧಾರದ ಮೇಲೆ ವಿವಿಧ ಅಭಿಪ್ರಾಯಗಳಿವೆ.
    ಯುರೋಪಿಯನ್ನರ ಜತೆ ಭಾರತಕ್ಕೆ ಬಂದು, ಅವರ ಅಧೀನದಲ್ಲಿದ್ದರಿಂದ ಕ್ರಿಶ್ಚಿಯನ್ನರಾಗುವುದು ಅನಿವಾರ್ಯವಾಯಿತು. ಕಾಲಾನಂತರ ಕಾಡಿಗೆ ಬಂದ ಮೇಲೆ ಕೆಲವು ಹಿಂದೂಗಳ ಜತೆ ಒಡನಾಡಿಯಾಗಿ ಹಿಂದೂ ಧರ್ಮೀಯರಾದರು. ಮುಸ್ಲಿಂ ದೊರೆಗಳು- ಬಿಜಾಪುರ ಸುಲ್ತಾನರ ಅವಧಿಯಲ್ಲಿ ಸಿದ್ದಿಯರನ್ನು ಸೈನ್ಯಕ್ಕೆ ಸೇರಿಕೊಂಡ ಉಲ್ಲೇಖಗಳಿವೆ. ಹೀಗೆ ಕೆಲವು ಸಿದ್ದಿಯರು ಮುಸ್ಲಿಂ ಧರ್ಮಕ್ಕೆ ಹೋದರು. ಇದ್ಯಾವುದೂ ಅವರ ಮೂಲ ಧರ್ಮವಲ್ಲ ಎನ್ನುತ್ತಾರೆ ಹಿ.ಚಿ.ಬೋರಲಿಂಗಯ್ಯ ಅವರು.
    ಸಮಾಜದಲ್ಲಿ ಸಿದ್ದಿ ಜನರು ಎಂದರೆ ನಿಗ್ರೋಗಳು, ಆಫ್ರಿಕಾದವರು ಎಂದು ನೋಡುತ್ತಾರೆ. ಆಫ್ರಿಕಾದವರಾದ್ದರಿಂದ ಕ್ರಿಶ್ಚಿಯನ್ನರು ಎಂದು ತಿಳಿಯುತ್ತಾರೆ. ಆಫ್ರಿಕಾ ಮೂಲದವರೆಲ್ಲ ಕ್ರಿಶ್ಚಿಯನ್ನರಾಗಲು ಸಾಧ್ಯವಿಲ್ಲ. ಈ ಸಂಗತಿಯನ್ನು ಕೆಲವರು ಅಪಪ್ರಚಾರ, ದುರ್ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಅಸಮಾಧಾನ ಮಂಚಿಕೇರಿಯ ಶಾಂತಾರಾಮ ಸಿದ್ದಿ ಅವರದ್ದು.
    ಧರ್ಮದ ಮೂಲ ಗೊತ್ತಿಲ್ಲದೇ ಇರುವುದರಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಧರ್ಮ ಸ್ವೀಕಾರವಾಗಿರಬೇಕು ಎನ್ನುತ್ತಾರೆ ಮಂಚಿಕೇರಿ ಬಳಿಯ ಅಣಲೆಸರದ ಪರಶುರಾಮ ಸಿದ್ದಿ.
    ೧೬೯೦ರ ಸಮಯದಲ್ಲಿ ಗೋವಾದಿಂದ ಕರ್ನಾಟಕಕ್ಕೆ ಓಡಿ ಬಂದ ಸಿದ್ದಿಗಳು ಕಾಡು ಸೇರಿ ಜೀವನ ನಡೆಸಲು ಆರಂಭಿಸಿರಬಹುದು. ಆವಾಗ ಯಾವ ಧರ್ಮದ ಜನರ ಒಡನಾಟ ಸಿದ್ದಿ ಜನರಿಗೆ ಸಿಕ್ಕಿತೋ ಆ ಧರ್ಮ ಸ್ವೀಕರಿಸಿದರು ಎನ್ನುತ್ತಾರೆ ವನವಾಸಿ ಕಲ್ಯಾಣ ಸಂಸ್ಥೆಯ ಕೃಷ್ಣಮೂರ್ತಿ.
  • ಧಾರ್ಮಿಕತೆ : ತ್ರಿ ಧರ್ಮದ ಸಿದ್ದಿಗಳೂ ಕುಟುಂಬದ ಹಿರಿಯರನ್ನು ಪೂಜಿಸುತ್ತಾರೆ. ಮುಸ್ಲಿಂ ಸಿದ್ದಿಗಳು ಗ್ರಹಣದ ನಂತರ ಮನೆಯಲ್ಲಿ ಇಟ್ಟ ತೆಂಗಿನಕಾಯಿಯನ್ನು ಬದಲಾಯಿಸುತ್ತಾರೆ. ಕ್ರಿಶ್ಚಿಯನ್‌ರಲ್ಲಿ ಎಲ್ಲರೂ ತೆಂಗಿನಕಾಯಿ ಪೂಜಿಸುವುದಿಲ್ಲ. ಹಿಂದೂ ಸಿದ್ದಿಗಳು ತೆಂಗಿನಕಾಯಿ ಪೂಜಿಸುತ್ತಾರೆ. ಕ್ರಿಶ್ಚಿಯನ್ ಸಿದ್ದಿಗಳು ಮದುವೆಗೆ ಮುನ್ನ ವಧು- ವರ ಚರ್ಚ್‌ನಲ್ಲಿ ಪಾದ್ರಿ ಬಳಿ ತರಬೇತಿ ಪಡೆಯುತ್ತಾರೆ. ಹಿಂದೂ ಸಿದ್ದಿಗಳ ಮದುವೆಯಲ್ಲಿ ಬ್ರಾಹ್ಮಣರ ಅನುಕರಣೆ ಇದೆ. ಮುಸ್ಲಿಂ ಸಿದ್ದಿಗಳ ಮದುವೆಗೆ ಮುಲ್ಲಾಗಳು ಬರುತ್ತಾರೆ.
  • ಜಾನಪದ ನಂಟು: ಡಮಾಮಿ ಮತ್ತು ಪುಗಡಿ ಹಿಂದೂ ಸಿದ್ದಿ ಜನರ ವಿಶೇಷ ಜಾನಪದ ವಾದ್ಯಗಳು. ಹಬ್ಬದಲ್ಲಿ ಈ ವಾದ್ಯದೊಂದಿಗೆ ಜಾನಪದ ನೃತ್ಯ ಮಾಡುತ್ತಾರೆ. ಮುಸ್ಲಿಂ ಸಿದ್ದಿಗಳು ಢೋಲಕಿ ಬಾರಿಸುತ್ತಾರೆ. ಅಲಗುಂ ಕುಣಿತ ಮಾಡುತ್ತಾರೆ. ಕ್ರಿಶ್ಚಿಯನ್ ಸಿದ್ದಿಗಳು ಜಾನಪದ ವಾದ್ಯ, ಕುಣಿತದಿಂದ ದೂರ. ಬುಡಕಟ್ಟು ಜನಾಂಗದವರಿಗೆ ಅವರದೇ ಆದ ಜನಪದ ಆಚರಣೆ ಇರುತ್ತವೆ. ಸಿದ್ದಿಗಳು ಹಿಂದಿನ ಕ್ರೌರ್‍ಯದ ಅವಧಿಯಲ್ಲಿ ಎಲ್ಲವನ್ನೂ ಮರೆತಿರಬೇಕು ಎನ್ನುತ್ತಾರೆ ಇತಿಹಾಸಕಾರರು.
  • ಅಡ್ಡ ಹೆಸರು : ಸಿದ್ದಿ ಜನರ ತ್ರಿ ಧರ್ಮವನ್ನು ಲೆಕ್ಕಿಸದೆ ಈ ಜನಾಂಗವನ್ನು ೧೯೮೬ರಲ್ಲಿ ಹಿಂದುಳಿದ ಪಂಗಡಕ್ಕೆ(ಬಿ ಟಿ) ಸೇರಿಸಲಾಗಿತ್ತು. ಹಸನ್ ಹುಸೇನ್ ಸಿದ್ದಿ, ನಾಗ್ಯಾ ಸಿದ್ದಿ, ಅಂಥೋನಿ ಸಿದ್ದಿ. ಈ ಮೂರು ಹೆಸರು ಒಂದೊಂದು ಧರ್ಮಕ್ಕೆ ಸೇರಿದ್ದು. ಎಲ್ಲರದ್ದೂ ಮೂಲತಃ ಸಿದ್ದಿ ಜನಾಂಗವೇ. ಒಂದೇ ಜನಾಂಗದವರಾಗಿದ್ದರೂ ಅವರ ಧರ್ಮ ಮಾತ್ರ ಬೇರೆ ಬೇರೆ. ಧರ್ಮ ಬದಲಾದಾಗ ಕೆಲವರು ತಮ್ಮ ಹೆಸರಿನೊಂದಿಗೆ ಇದ್ದ ‘ಸಿದ್ದಿ’ ಅಡ್ಡ ಹೆಸರು ಕೈಬಿಟ್ಟರು. ೨೦೦೩ರಲ್ಲಿ ಸಿದ್ದಿ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲಾಯಿತು. ಇದರಂತೆ ಸಿದ್ದಿ ಎಂಬ ಹೆಸರು ಇರುವವರಿಗೆ ಮಾತ್ರ ಪರಿಶಿಷ್ಟ ವರ್ಗಕ್ಕೆ ದೊರೆಯುವ ಸೌಲಭ್ಯ ಸಿಗುವುದು. ಸಿದ್ದಿ ಮೂಲದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದಲ್ಲಿರುವವರು ತಮ್ಮ ಹೆಸರಿನೊಂದಿಗೆ ‘ಸಿದ್ದಿ’ಯನ್ನು ಕೈಬಿಟ್ಟಿದ್ದರು. ಆದರೆ ಎಸ್‌ಟಿ ಜನರ ಸೌಲಭ್ಯ ಪಡೆಯಲು ಪುನಃ ಕೆಲವರು ಸಿದ್ದಿ ಅಡ್ಡ ಹೆಸರನ್ನು ಸೇರಿಸಿಕೊಂಡರು.

Saturday, July 18, 2009

ಹುತ್ತದಲ್ಲಿ ಅಣಬೆ ನೋಡಿದ್ದೀರಾ?


ಹುತ್ತದಲ್ಲಿ ಅಣಬೆ ನೋಡಿದ್ದೀರಾ? ಸಿನೇಮಾಗಳಲ್ಲಿ ಹುತ್ತದಿಂದ ಹಾವು ಬರುವುದು ಗೊತ್ತು , ಇನ್ನು ಹುತ್ತದಲ್ಲಿ ಗೆದ್ದಲು ನೋಡಿದ್ದೇವೆ. ಆದರೆ ಅಣಬೆ?
ಹುತ್ತದ ಅಣಬೆ ರುಚಿಗೆ ನಾಲಿಗೆ ಎಷ್ಟು ಮರುಳಾಗಿದೆ ಎಂದರೆ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ಸೇರಿದಂತೆ ದೇಶ, ವಿದೇಶದ ಹಲವು ವಿಶ್ವ ವಿದ್ಯಾಲಯಗ ವಿಜ್ಞಾನಿಗಳು ಹುತ್ತದ ಅಣಬೆ ಜೀನ್‌ಗಳನ್ನು ಪ್ರತ್ಯೇಕಿಸಿ ಲ್ಯಾಬ್‌ನಲ್ಲಿ ಬೆಳೆಯಲು ಪ್ರಯತ್ನಿಸಿದ್ದಾರೆ. ಆದರೆ ಹುತ್ತದ ಅಣಬೆ ಮಾತ್ರ ಲ್ಯಾಬ್‌ನಲ್ಲಿ ಹುಟ್ಟಲಿಲ್ಲ. ಒಮ್ಮೆ ಈ ಹುತ್ತದ ಅಣಬೆಯ ಜೀನ್‌ಗಳನ್ನು ಅಭಿವೃದ್ಧಿಪಡಿಸಿ ಲ್ಯಾಬ್‌ನಲ್ಲಿ ಬೆಳೆಯಲು ಸಾಧ್ಯವಾಗಿದ್ದರೆ ಅಣಬೆಯ ರುಚಿ ತಿನ್ನುವವರಿಗೆಲ್ಲರಿಗೂ ಸಿಗುತ್ತಿತ್ತು.ಹುತ್ತದ ಅಣಬೆ ಹುಟ್ಟು ಕುತೂಹಲ. ಗೆದ್ದಲುಗಳ ಹುತ್ತದಲ್ಲಿ (ಫಂಗಲ್ ಗಾರ್ಡ್‌ನ್) ಶಿಲೀಂದ್ರ ತೋಟ ಇರುತ್ತವೆ. ಇದೇ ಫಂಗಲ್ ಗಾರ್ಡ್‌ನ್ ಹುತ್ತದ ಅಣಬೆಯ ಜನ್ಮಕ್ಕ ಕಾರಣೀಭೂತ. ಟರ್ಮೈಟೋಮೈಸಿಸ್ ಜಾತಿಯ ಶಿಲೀಂದ್ರ ಹುತ್ತದ ಅಣಬೆಯ ಜನ್ಮಕ್ಕೆ ಮೂ. ಇವು ಮಣ್ಣಿನಲ್ಲಿ ಬೆರೆತು, ನಿರ್ದಿಷ್ಟ ಹವಾಗುಣದಲ್ಲಿ ಅಣಬೆಯಾಗಿ ಹುಟ್ಟುತ್ತವೆ. ಮಳೆಗಾಲದಲ್ಲಿ ಮಾತ್ರ ಹುತ್ತದ ಅಣಬೆ ಏಳುವುದು. ಸಾಮಾನ್ಯವಾಗಿ ಗುಂಪು ಗುಂಪಿನಲ್ಲಿ ೧೦ರಿಂದ ನೂರಾರು ಅಣಬೆಗಳು ಒಮ್ಮೆಲೇ ಜನಿಸುತ್ತವೆ. ಹುಟ್ಟಿದ ಒಂದರಿಂದ ಎರಡು ದಿನದ ಅವಧಿಯಲ್ಲೇ ಇವು ಕೊಳೆಯುತ್ತವೆ. ಆಗತಾನೇ ಹುಟ್ಟಿದ ಅಣಬೆಯ ಮೊಗ್ಗು, (ಅಂದರೆ, ಇನ್ನೂ ಅರಳದ) ಸಿಕ್ಕರೆ ಬಾಜಿ ಮಾಡಲು ತುಂಬಾ ಯೋಗ್ಯವಾದದ್ದು.
ಬೆಳಗಾವಿ, ಕುಮಟಾ, ಶಿರಸಿ, ಹಳಿಯಾಳ, ದಾಂಡೇಲಿ ಸೇರಿದಂತೆ ವ
ಿವಿಧೆಡೆಮಳೆಗಾಲದಲ್ಲಿ ಸೀಸನಲ್ ಅಣಬೆ ಮಾರುಕಟ್ಟಯೇ ಇರುತ್ತದೆ. ಜನ ಈ ಅಣಬೆಯನ್ನು ಮುಗಿಬಿದ್ದು ಕೊಳ್ಳುವುದೂ ಇದೆ.
ಪಕ್ಕದ ಗೋವಾದಲ್ಲಿ ೧೯೮೪ರಲ್ಲೇ ವಾರ್ಷಿಕ ೫ ಲಕ್ಷ (ನೂರು ಅಣ
ಬೆಗೆ ೫ ರುರಾಯಿ) ಮೌಲ್ಯದ ಅಣಬೆ ಮಾರಾಟವಾಗುತ್ತಿತ್ತು ಎಂಬ ಮಾಹಿತಿ ಇಂಟನ್‌ನೆಟ್‌ನಲ್ಲಿ ಲಭ್ಯವಿದೆ. ೨೦೦೪ರಲ್ಲಿ ೪೦ರಿಂದ ೫೦ ಅಣಬೆಗೆ ೧೫೦ ರು. ಬೆಲೆ ಇತ್ತು ಎಂದೂ ಇಂಟರ್‌ನೆಟ್ ಮಾಹಿತಿಗಳು ಹೇಳುತ್ತವೆ. ಅಲ್ಲಿ ಹುತ್ತದ ಅಣಬೆ ಮಾರಾಟ, ದಂಧೆ ಜೋರಾಗಿಯೇ ನಡೆದಿತ್ತು. ೧೯೯೩ರಲ್ಲಿ ಅಲ್ಲಿನ ಸರ್ಕಾರ ವನ್ಯ ಜೀವಿ ಧಾಮ ಪ್ರದೇಶದಲ್ಲಿ ಹುತ್ತದ ಅಣಬೆ ಕೀಳುವುದನ್ನು ನಿಷೇಧಿಸಿತ್ತು. ಬಳಿಕ ಈ ಕುರಿತು ಸಾಕಷ್ಟು ವಿವಾದವೂ ಆಗಿತ್ತು.
ಮೊದಲು ಅಣಬೆ ಹುಡುಕಲು ಕಾಡು, ಬೆಟ್ಟಕ್ಕೆ ಹೋದವರು ಬರಿ ಕೈಯಲ್ಲಿ ವಾಪಸ್ ಆಗುತ್ತಿರಲಿಲ್ಲವಂತೆ. ಕಂಬಳಿ, ಹಾಳೆ ತುಂಬಾ ಅಣಬೆ ತುಂಬಿಕೊಂಡೇ ಮನೆಗೆ ಬರುತ್ತಿದ್ದರು. ಗಣೇಶ ಚತುರ್ಥಿ ಆಸು ಪಾಸು ಹುತ್ತದ ಅಣಬೆ ಏಳುವುದು ಹೆಚ್ಚು. ಅಮಾವಾಸ್ಯೆ, ಹುಣ್ಣಿಮೆಯ ಹಿಂದು ಮುಂದಿನ ದಿನಗಳಲ್ಲೂ ಏಳುವುದಿದೆ. ಈ ಅವಧಿಯಲ್ಲಿ ಗಾಳಿ ಮಳೆ ಆದರೆ ಖಂಡಿತಾ ಹುತ್ತದ ಅಣಬೆ ತಲೆ ಎತ್ತುತ್ತವೆ ಎಂಬುದು ಅಣಬೆ ಕೀಳುವವರ ಸಾಮಾನ್ಯ ಜ್ಞಾನ.
ಗಣೇಶ ಚತುರ್ಥಿ ವೇಳೆಗೆ ಊರಿಗೆ ಹೋದಾಗ ಹುತ್ತದ ಅಣಬೆ ನೋಡುವ ಕುತೂಹಲದಿಂದ, ಮಧುನ ಜತೆಗೆ ನಾನು ಹೊಸಬೆಟ್ಟ ಸೇರಿದಂತೆ, ಸುತ್ತಲಿನ ಅರಣ್ಯಕ್ಕೆ ಹೋಗುತ್ತಿದ್ದೆ. ಹೀಗೆ ಹುತ್ತದ ಅಣಬೆ ನೋಡಲು ಹೋದಾಗ ೩ ಹುತ್ತದಲ್ಲಿ ಅಣಬೆ ಅರಳಿತ್ತು.

Wednesday, May 6, 2009

ಅಂಚೆ ಚೀಟಿಯಲ್ಲಿ ಕೃಷಿಲೋಕ



ಅಂಚೆ ಚೀಟಿಯಲ್ಲಿ ದೇಶದ ಕೃಷಿಯ ಆಗುಹೋಗುಗಳ ಸ್ಥೂಲನೋಟ ಸಾಧ್ಯ. ಇಲ್ಲಿದೆ ಅಂತಹ ಕಿರು ಪ್ರಯತ್ನ.

  • ಮೊದಲ ಕೃಷಿ ಅಂಚೆ ಚೀಟಿ: ಸ್ವತಂತ್ರ್ಯಾನಂತರ ೧೯೫೦ರಲ್ಲಿ ದೇಶದಲ್ಲಿ ಮೊದಲ ಬಾರಿ ಕೃಷಿಗೆ ಸಂಬಂಧಿಸಿದ ಸ್ಟ್ಯಾಂಪ್ ಬಿಡುಗಡೆಯಾಯಿತು. ತೆನೆ, ನೇಗಿಲು ಮತ್ತು ನೀರೀಕ್ಷೆಯಿಂದ ಮೇಲೆ ನೋಡುತ್ತಿರುವ ಪುರುಷ- ಸ್ತ್ರೀ ಚಿತ್ರ ಇದರಲ್ಲಿದೆ. ಈ ಅಂಚೆ ಚೀಟಿ ಮೌಲ್ಯ ೪ ಅಣೆ. ನಮ್ಮದು ಕೃಷಿ ಪ್ರಧಾನ ದೇಶ ಹಾಗೂ ಕೃಷಿಯಲ್ಲಿ ಇನ್ನೂ ಸಾಧನೆ ಮಾಡಬೇಕು ಎಂಬ ಸಂದೇಶ ಈ ಅಂಚೆ ಚೀಟಿಯದ್ದು. ಜನವರಿ ೨೬ ೧೯೫೦ರಲ್ಲಿ ಬಿಡುಗಡೆಯಾಯಿತು.

  • ದೆಹಲಿಯಲ್ಲಿ ಮೊದಲ ವಿಶ್ವ ಕೃಷಿ ಸಮ್ಮೇಳನ ೩೦ ಡಿಸೆಂಬರ್ ೧೯೫೮ರಲ್ಲಿ ನಡೆಯಿತು. ದೇಶದ ಕೃಷಿ ಜೀವನ ಈ ಸಮ್ಮೇಳನದಲ್ಲಿ ಬಿಂಬಿತವಾಗಿತ್ತು. ಈ ಸಮ್ಮೇಳನ ಸ್ಮರಣಾರ್ಥ ಜೋಡಿ ಎತ್ತಿಗೆ ಕಟ್ಟಿದ ನೇಗಿಲಿನಿಂದ ಊಳುತ್ತಿರುವ ರೈತನ ಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯ ೧೫ ಪೈಸೆ.

  • ಜೈ ಕಿಸಾನ್: ಲಾಲ್‌ಬಹಾದೂರ್ ಶಾಸ್ತ್ರಿ ಅವರ ಜೈ ಕಿಸಾನ್, ಜೈ ಜವಾನ್ ಘೋಷಣೆಯ ಮೇಲೆ ಅಂಚೆ ಚೀಟಿ ತರಲಾಗಿದೆ. ಶಾಸ್ತ್ರಿ ಅವರ ಮೊದಲ ಪುಣ್ಯತಿಥಿಯಂದು ಜೈ ಕಿಸಾನ್ ಅಂಚೆ ಚೀಟಿ ಬಿಡುಗಡೆಯಾಯಿತು. ೧೭ ಜನವರಿ ೧೯೬೭ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿ ಮೌಲ್ಯ ೧೫ ಪೈಸೆ. ಪೈರು ಕೊಯ್ಯುತ್ತಿರುವ ರೈತರ ಚಿತ್ರ ಇದರಲ್ಲಿದೆ.
    ೪ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಆಧ್ಯತೆ ನೀಡಲಾಗಿತ್ತು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶವನ್ನು ಅಂಚೆ ಚೀಟಿ ಬಿಂಬಿಸುತ್ತದೆ. ಅಂದು ಇದ್ದ ೧೨೦ ಮಿಲಿಯನ್ ಟನ್ ನಷ್ಟು ಆಹಾರ ಉತ್ಪಾದನೆಯನ್ನು ೧೯೭೦ -೭೧ರ ವೇಳೆಯಲ್ಲಿ ಹೆಚ್ಚುವರಿಯಾಗಿ ೩೦ ಮಿಲಿಯನ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು ಎಂದು ಜೈಕಿಸಾನ್ ಅಂಚೆ ಚೀಟಿಯ ಲೀಪ್‌ಲೆಟ್‌ನಲ್ಲಿ ಹೇಳಲಾಗಿದೆ.

  • ೧೯೫೧ರಿಂದ ೧೯೬೮ರ ಅವಧಿಯಲ್ಲಿ ದೇಶದಲ್ಲಾದ ಗೋಧಿ ಕ್ರಾಂತಿ ನಿಮಿತ್ತ ೧೯೬೮ ಜುಲೈ ೧೭ರಂದು ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ೨೦ ಪೈಸೆ ಇದರ ಬೆಲೆ.

  • ಆಧುನಿಕ ನೇಗಿಲು :ದೇಶಕ್ಕೆ ಆಧುನಿಕ ಕಬ್ಬಿಣದ ನೇಗಿಲು ಪರಿಚಯಿಸಿದವರು ಲಕ್ಷ್ಮಣರಾವ್ ಕಿರ್ಲೋಸ್ಕರ್. ಅವರು ಕರ್ನಾಟಕದ ಬೆಳಗಾವಿಯವರು. ಕಿರ್ಲೋಸ್ಕರ್ ಗ್ರುಪ್‌ನ ಮೊದಲ ಉತ್ಪನ್ನ ಮೈಕಾನೈಸ್ಡ್ ನೇಗಿಲು. ಲಕ್ಷ್ಮಣರಾವ್ ಅವರ ಜನ್ಮ ಶತಾಬ್ದಿ ನಿಮಿತ್ತ ೨೦ ಜೂನ್ ೧೯೬೯ರಲ್ಲಿ ಲಕ್ಷ್ಮಣರಾವ್ ಕಿರ್ಲೋಸ್ಕರ್ ಫೋಟೋ ಮತ್ತು ಅವರು ಸಂಶೋಧಿಸಿದ ನೇಗಿಲಿನ ರೇಖಾ ಚಿತ್ರದ ಅಂಚೆ ಚೀಟಿ ಮುದ್ರಿತವಾಗಿದೆ. ಮೌಲ್ಯ ೨೦ ಪೈಸೆ.

  • ನೀರಾವರಿ ಕಮಿಷನ್‌ನ ೨೫ನೇ ವಾರ್ಷಿಕ ದಿನ ಅಂಗವಾಗಿ ೧೯೭೫ರಲ್ಲಿ ಅಂಚೆ ಚೀಟಿ ಮುದ್ರಿಸಲಾಗಿದೆ. ಮೌಲ್ಯ ೨೫ ಪೈಸೆ.

  • ೧೯೭೬ ಡಿಸೆಂಬರ್ ೨೭ರಂದು ಹೈಬ್ರಿಡ್ ತೆಂಗಿನ ತಳಿಯ ಅಂಚೆ ಚೀಟಿ ಬಿಡುಗಡೆಯಾಗಿದೆ. ಡೈಮಂಡ್ ಜುಬ್ಲಿ ಆಫ್ ಕೋಕೋನಟ್ ರಿಸರ್ಚ್‌ನ ಸ್ಮರಣಾರ್ಥ ಇದನ್ನು ಮುದ್ರಿಸಲಾಗಿದೆ. ಬೆಲೆ ೨೫ ಪೈಸೆ.


  • ೧೯೭೭ರಲ್ಲಿ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನ ನಡೆದಿತ್ತು. ಇದರ ಅಂಗವಾಗಿ ೧೩ ನವೆಂಬರ್ ೧೯೭೭ರಲ್ಲಿ ಗೋಧಿಯ ತೆನೆಯ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆಯಾಗಿದೆ. ಪ್ರದರ್ಶನದಲ್ಲಿ ಅಪ್ಘಾನಿಸ್ಥಾನ, ಹಂಗೇರಿ, ಜಪಾನ್, ಯುಎಸ್‌ಎಸ್‌ಆರ್ ಇನ್ನಿತರ ದೇಶಗಳು ಪಾಲ್ಗೊಂಡಿದ್ದವು. ಅಂಚೆ ಚೀಟಿ ಮೌಲ್ಯ ೨೫ ಪೈಸೆ.


  • ೫ನೇ ಅಂತಾರಾಷ್ಟ್ರೀಯ ಗೋಧಿ ತಳಿ ವಿಚಾರ ಸಂಕಿರಣ ದೆಹಲಿಯಲ್ಲಿ ನಡೆಯಿತು. ಇದರ ಅಂಗವಾಗಿ ಗೋಧಿ, ಜಗತ್ತು ಮತ್ತು ಡಿಎನ್‌ಎ ವಿಷಯದೊಂದಿಗೆ ೨೩ ಫೆಬ್ರವರಿ ೧೯೭೭ ರಂದು ೨೫ ಪೈಸೆ ಬೆಲೆಯ ಅಂಚೆ ಚೀಟಿ ಬಿಡುಗಡೆಯಾಗಿದೆ.


  • ೧೯೮೦-೮೧ನೇ ಸಾಲಿನಲ್ಲಿ ಉಳುಮೆ, ಟ್ರಾಕ್ಟರ್, ಮಾವು, ಸೇಬು, ಗೇರು, ನೀರಾವರಿ, ಹಾಲು ಉತ್ಪಾದನೆ, ಕೃಷಿ ಮತ್ತು ತಂತ್ರಜ್ಞಾನ, ಹತ್ತಿ, ರಬ್ಬರ್ ತೆಗೆಯುವುದು ಸೇರಿದಂತೆ ಇತರ ವಿಷಯಗಳ ಅಂಚೆ ಚೀಟಿಯ ಸರಣಿ ಬಿಡುಗಡೆಯಾಗಿದೆ.


  • ವಿಶ್ವ ಆಹಾರ ದಿನದ ಸಂಕೇತವಾಗಿ ೧೯೮೧ ಅಕ್ಟೋಬರ್ ೧೬ರಂದು ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ೧ ರುಪಾಯಿ.


  • ಭಾರತದಲ್ಲಿ ಬಟಾಟೆ ತಳಿಯ ಸಂಶೋಧನೆಯ ೫೦ನೇ ವರ್ಷದ(೧೯೩೫- ೧೯೮೫) ಅಂಗವಾಗಿ ೫೦ ಪೈಸೆ ಬೆಲೆಯ ಅಂಚೆ ಚೀಟಿ ೧೯೮೫ ಏಪ್ರೀಲ್ ೧ರಂದು ಬಿಡುಗಡೆಯಾಗಿದೆ.


  • ೧೯೯೦ ಜುಲೈ ೩೧ರಂದು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್‌ನ ೬೦ನೇ ವರ್ಷದ ಅಂಗವಾಗಿ ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ೨ ರುಪಾಯಿ.


  • ೧೯೯೨ ಡಿಸೆಂಬರ್ ೨೨ರಂದು ಹರ್‍ಯಾಣ ರಾಜ್ಯದ ಸಿಲ್ವರ್ ಜುಬ್ಲಿ ಅಂಗವಾಗಿ ಅಂಚೆ ಚೀಟಿ ಪ್ರಕಟಿಸಲಾಗಿದೆ. ವಿದ್ಯುತ್, ರೈತ ಮತ್ತು ಬೆಳೆಯ ವಿಷಯ ಅಂಚೆ ಚೀಟಿಯದ್ದು. ಬೆಲೆ ೨ ರುಪಾಯಿ.


  • ೧೯೯೩ ಮಾರ್ಚ್ ೨೬ರಂದು ಯುನೈಟೆಡ್ ಪ್ಲಾಂಟರ್‍ಸ್ ಅಸೋಸಿಯೇಷನ್ ಆಫ್ ಸೌಥ್ ಇಂಡಿಯಾದ ಶತಮಾನೋತ್ಸವ ಅಂಚೆ ಚೀಟಿ ಬಿಡುಗಡೆಯಾಗಿದೆ. ಬೆಲೆ ೨ ರು.


  • ‘ಈಯರ್ ಇಂಡಿಯನ್ ಟೀ’ ವಿಷಯದಲ್ಲಿ ಟೀ ಎಲೆ ಮತ್ತು ಎಲೆ ಕೊಯ್ಯುವ ವಿಷಯದ ಅಂಚೆ ಚೀಟಿ ೧೯೯೩ ಡಿಸೆಂಬರ್ ೧೧ರಂದು ಬಿಡುಗಡೆಯಾಗಿದೆ. ಬೆಲೆ ೬ ರುಪಾಯಿ.


  • ‘ವೀಟ್ ಸೀಡ್ ಇನ್ ಎ ಟೆಸ್ಟ್ ಟ್ಯೂಬ್(ಡಿನ್‌ಎ ಟ್ರೀಟೆಡ್)’ನ ಅಂಚೆ ನವದೆಹಲಿಯಲ್ಲಿ ೧೯೯೬ ಡಿಸೆಂಬರ್ ೪ ರಂದು ನಡೆದ ೨ನೇ ಅಂತಾರಾಷ್ಟ್ರೀಯ ಕ್ರಾಪ್ ಸೈನ್ಸ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗಿದೆ. ಬೆಲೆ ೨ ರುಪಾಯಿ.


  • ರೈತ ಪರ ಹೋರಾಟಗಾರ, ಕೇಂದ್ರ ಮಂತ್ರಿಯಾಗಿದ್ದ ಪಂಚಾಬರಾವ್ ದೇಶಮುಖ ಅವರ ನೆನಪಿನಲ್ಲಿ ೧೯೯೯ ಡಿಸೆಂಬರ್ ೭ರಂದು ಅಂಚೆ ಚೀಟಿ ಬಿಡುಗಡೆಯಾಗಿದೆ. ಪಂಜಾಬರಾವ್ ದೇಶಮುಖ ಅವರ ಚಿತ್ರ ಇದರಲ್ಲಿದೆ. ಬೆಲೆ ೩ ರು.


  • ೨೦೦೦ನೇ ಇಸವಿಯ ಏಪ್ರಿಲ್ ೨೫ರಂದು ನಾಲ್ಕು ದೇಶೀಯ ಎತ್ತಿನ ತಳಿಯ ಮೇಲೆ ಅಂಚೆ ಚೀಟಿ ಪ್ರಕಟಿಸಲಾಗಿದೆ. ಕರ್ನಾಟಕದ ಹಳ್ಳಿಕಾರ್, ಗುಜರಾತ್‌ನ ಗಿರ್, ಕಂಗ್ರೇಜ್ ಮತ್ತು ತಮಿಳುನಾಡಿನ ಕಂಕಯಮ್ ತಳಿಯ ಪ್ರತ್ಯೇಕ ನಾಲ್ಕು ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ಒಂದಕ್ಕೆ ೩ ರು.


  • ೨೦೦೬ರ ಮಾರ್ಚ್ ೩೦ರಂದು ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್‌ನ ಅಂಚೆ ಚೀಟಿ ಬಿಡುಗಡೆಯಾಗಿದೆ.


ಕೃಷಿ ಅಂಚೆ ಚೀಟಿ ಮಾಹಿತಿ ನೀಡಿದವರು ಬೆಳಗಾವಿಯ ಕೆ.ಜಿ.ಕಡೆಕೋಡಿ. ೨೦೦ಕ್ಕೂ ಹೆಚ್ಚು ದೇಶಗಳ ಅಂಚೆ ಚೀಟಿ ಸಂಗ್ರಹಿಸಿದ್ದಾರೆ ಅವರು. ರಾಜ್ಯದ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಂಬ ಹೆಗ್ಗಳಿಕೆಯೂ ಅವರದ್ದು. ಜಗತ್ತಿನ ಅಪರೂಪದ, ಅಮೂಲ್ಯ ಅಂಚೆ ಚೀಟಿಗೆ ಒಡೆಯ. ಹತ್ತಾರು ಪ್ರಶಸ್ತಿ, ಸನ್ಮಾನ. ತಮ್ಮ ಇಳಿ ವಯಸ್ಸಿನಲ್ಲೂ ಹಳೆಯ ಕಾಲದ ವಸ್ತು, ನಾಣ್ಯ ಸಂಗ್ರಹಿಸುವ ಅದಮ್ಯ ಉತ್ಸಾಹ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ ಕಡೆಕೋಡಿ.
‘ಫಾರೆವರ್ ಯಂಗ್’ ಎಂದು ಅಮೇರಿಕಾ ತನ್ನ ಅಂಚೆ ಚೀಟಿಯಲ್ಲಿ ಕೆ.ಜಿ.ಕಡೇಕೋಡಿ ಭಾವಚಿತ್ರವನ್ನು ಮುದ್ರಿಸಿದೆ.ಅಂಚೆ ಚೀಟಿ, ಹಳೆಯ ವಸ್ತು ಸಂಗ್ರಹದ ಗೀಳಿನಿಂದ ಅಮೇರಿಕಾದ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡಿರುವುದು ಅವರ ಹವ್ಯಾಸಕ್ಕೆ ಒಂದು ಗೌರವೇ ಸರಿ.೧೯೬೨ರ ಬಳಿಕ ಅಂಚೆ ಚೀಟಿ ಸಂಗ್ರಹದ ಗೀಳಿಗೆ ಬಿದ್ದ ಅವರು ಇಂದು ಅಂಚೆ ಚೀಟಿ ಇತಿಹಾಸವನ್ನು ಸುಲಲಿತವಾಗಿ ಹೇಳುತ್ತಾರೆ. ಗಾಂಧಿ, ಸ್ವಾತಂತ್ರ್ಯ ಹೋರಾಟ, ಹಣ್ಣು, ಸಂಗೀತ, ಕಲೆ- ಸಾಹಿತ್ಯ ಹೀಗೆ ಒಂದೊಂದು ವಿಷಯದ ಮೇಲೆಯೂ ಅಂಚೆ ಚೀಟಿ ಪ್ರದರ್ಶಿಸುವ ಅವರ ಆಸಕ್ತಿ ಒಂದು ಅದ್ಭುತ.

Sunday, November 23, 2008

ವಾಹ್.....ತಾಜ್...







ವಿಶ್ವದ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಒಂದು ಎಂದು ಎಲ್ಲರಿಗೂ ಗೊತ್ತು. ಎಂಎಚ್‌ಓದಲ್ಲಿ ಕಾಣಿಸಿಕೊಂಡ ತಾಜ್ ಮಹಲ್‌ನ ಈ ಚಿತ್ರ ಅದೆಷ್ಟು ಸುಂದರ. ಅಲ್ಲವೇ?

Thursday, October 9, 2008

ಕರ್ನಾಟಕದ ನಯಾಗರ.....



















ಮೇ ತಿಂಗಳಲ್ಲಿ ಗೋಕಾಕ ಫಾಲ್ಸ್‌ಗೆ ಹೋದಾಗ ನೀರು ಅತಿ ಕನಿಷ್ಠ ಪ್ರಮಾಣದಲ್ಲಿ ಹರಿಯುತ್ತಿತ್ತು. ಮುಂಗಾರು ಮಳೆಯಲ್ಲಿ ಗಣೇಶ ಜಲಪಾತದ ತುದಿಗೆ ಹೋದಹಾಗೆ ನಾವೂ ಗೋಕಾಕ ಫಾಲ್ಸ್‌ನ ಶಿಲೆಯ ತುದಿಗೆ ಅಥವಾ ನೀರು ಕೆಳಕ್ಕೆ ಬೀಳುವ ತುದಿಗೆ ಹೋಗಿ ಕೂಹೂ...ಹೂ.. ಎಂದಿದ್ದೆವು.
ಆಗಸ್ಟ್‌ನಲ್ಲಿ ಹೋದಾಗ ಅಲ್ಲಿನ ಚಿತ್ರಣವೇ ಬೇರೆ. ೧೭೭ ಮೀ. ಅಗಲಕ್ಕೆ ನೀರು ಹರಿಯುತ್ತಿತ್ತು. ರಭಸವಾಗಿ. ಮೇ ತಿಂಗಳ ಅಂತ್ಯಕ್ಕೂ ಆಗಸ್ಟ್‌ನ ಭೇಟಿಗೂ ಇರುವ ಮಜವೇ ಬೇರೆ. ಜಲಪಾತದ ಅಗಲ ಅಥವಾ ನೀರು ಹರಿಯುವ ಕ್ಷೇತ್ರ ೧೭೭ ಮೀಟರ್. ನೀರು ಕೆಳಕ್ಕೆ ಧುಮುಕುವುದು ಕೇವಲ ೫೨ ಮೀಟರ್ ಎತ್ತರದಿಂದ ಅಷ್ಟೆ. ಹರಡಿ ಹರಡಿ ವಿಶಾಲವಾಗಿ ನೀರು ಬೀಳುತ್ತದೆ. ಆದರೆ ಎತ್ತರ ಕಡಿಮೆ. ಅದಕ್ಕೇ ಅದನ್ನು ಕರ್ನಾಟಕದ ನಯಾಗರ ಎನ್ನುವುದು.
ಘಟಪ್ರಭಾ ನದಿಯ ಈ ಜಲಪಾತದ ಅಕ್ಕ ಪಕ್ಕದ ಊರಿಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ಇದೆ. ತೂಗು ಸೇತುವೆಯ ಕಿರು ನಡಿಗೆ ಅದ್ಭುತ ಅನುಭವ. ಮೊದಲೇ ಅದು ತೂಗುವ ಸೇತುವೆ. ಕೆಳಗೆ ರಭಸವಾಗಿ ಹರಿಯುತ್ತಿರುವ ನೀರು ನೀರು. ಒಂದು ಮಗ್ಗುಲಿನಲ್ಲಿ ಮುನ್ನುಗ್ಗಿ ಬರುವ ನೀರಿನ ಹರಿವು. ಇನ್ನೊಂದು ಪಕ್ಕ ಧುಮಕುವ ನೀರಿನ ಪ್ರಪಾತ. ಗಾಳಿ- ಜನರ ಓಡಾಟಕ್ಕೆ ಅಲ್ಲಾಡುವ ಸೇತುವೆ. ಎಷ್ಟು ಜಲಪಾತ ನೋಡಿದರೂ ಅಂಥ ತೂಗು ಸೇತುವೆ ನಡಿಗೆ ಅನುಭವ ಭಾರೀ ಅಪರೂಪವೇ. ತೂಗು ಸೇತುವೆ ಉದ್ದ ೨೧೦ ಮೀ.
ಅಂದಹಾಗೆ ಗೋಕಾಕ ಫಾಲ್ಸ್‌ನಲ್ಲಿ ೧೮೮೭ರಿಂದಲೇ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು ದೇಶದಲ್ಲೇ ಮೊದಲು. ಗೋಕಾಕದದ ಬಳಿ ಗೊಡಚಿನ ಮಲ್ಕಿ ಎಂಬ ಇನ್ನೊಂದು ಸುಂದರ ಜಲಪಾತವಿದೆ. ಗೋಕಾಕ ಕರದಂಟು, ಗೋಕಾಕ್ ಮಿಲ್‌ನ ಬಟ್ಟೆಗೂ ಪ್ರಸಿದ್ಧ.

Wednesday, October 1, 2008

ಅವರದು ಸರಳ ಜೀವನ



ವರ್ಷವೂ ಅ.೨ರಂದು ಗಾಂಧಿ ಜಯಂತಿ ಆಚರಿಸುತ್ತೇವೆ. ಅದರಂತೆ ಈ ವರ್ಷವೂ ಕೂಡಾ.
ಸದಾಶಿವ ಭೋಸಲೆ ಅವರ ವಯಸ್ಸು ೮೮. ಚರಕದಲ್ಲಿ ನೂಲು ತೆಗೆದು, ಮಗ್ಗಕ್ಕೆ ಕೊಡುತ್ತಾರೆ. ಅದೇ ಬಟ್ಟೆಯನ್ನು ಧರಿಸುತ್ತಾರೆ. ಇನ್ನೂ ಸ್ವ ಕೃಷಿಕಾರ್‍ಯದಲ್ಲಿ ತೊಡಗುತ್ತಾರೆ. ಅವರು ಮಾಜಿ ಶಾಸಕರು. ಅವರದು ಸರಳ ಜೀವನ.
ಅವರು ಕುರಿತ ಲೇಖನವನ್ನು ಓದಿ.
http://www.kannadaprabha.com/NewsItems.asp?ID=KP420080927050110&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=9/28/2008&Dist=0