Friday, June 27, 2008

ವಹಿವಾಟಿಗೆ ವಿದಾಯ ಹೇಳಿದೆ ‘ಪಾರಂಪರಿಕ ಮಾಪಕ’

ಮೆಟ್ರಿಕ್ ಕ್ರಮ ಜಾರಿಯಲ್ಲಿ ಬರುವ ಮೊದಲು ಕೊಡುಕೊಳ್ಳುವ ವ್ಯವಹಾರ ಮತ್ತು ಆಡಳಿತ ವ್ಯವಹಾರದಲ್ಲಿ ಪಾರಂಪರಿಕ ಮಾಪಕ ಪದ್ಧತಿ ಬಳಕೆಯಲ್ಲಿತ್ತು. ಅಧಿಕೃತವಾಗಿ ೧೯೫೮ರಲ್ಲಿ ಭಾರತದಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂದಿದೆ. ಈ ಮೆಟ್ರಿಕ್ ಮಾಪಕ ಪದ್ಧತಿ ಬಳಕೆಗೆ ಬಂದು ನಾಲ್ಕು ದಶಕಗಳು ಉರುಳಿದರೂ ಮನಸ್ಸಿನಿಂದ, ವ್ಯವಹಾರದಿಂದ ಬಿಟ್ಟು ಹೊಗಿಲ್ಲ. ಉತ್ತರ ಕರ್ನಾಟಕ ಗ್ರಾಮೀಣ ಜನರ ಕೊಡುಕೊಳ್ಳುವ ವ್ಯವಹಾರದಲ್ಲಿ ಸೇರು, ಪಾವಿನ ಅಳತೆ ಪದ್ಧತಿ ಅಳಿವಿನಲ್ಲೂ ಉಳಿದಿದೆ. ಹಳ್ಳಿಯಲ್ಲಿ ಬೆಳೆದ ತರಕಾರಿಯನ್ನು ಬೆಳಗಾವಿ ನಗರದಲ್ಲಿ ಮಾರಾಟ ಮಾಡುವ ಹಳ್ಳಿಗರು ತಕ್ಕಡಿ ಮತ್ತು ಅಳತೆ ಕಲ್ಲಿನೊಂದಿಗೆ ಇಂದಿಗೂ ಸೇರು, ಪಾವಿನ ಮಾಪಕಗಳನ್ನು ತಮ್ಮೊಂದಿಗೆ ತರುತ್ತಾರೆ. ಬೆಳ್ಳುಳ್ಳಿ, ಮೊಳಕೆ ಕಾಳುಗಳು, ಜವಾರಿ ಅಕ್ಕಿ, ಅವರೆ ಬೀಜ, ಧಾನ್ಯಗಳನ್ನು ಮಾರಾಟ ಮಾಡುವುದು ಪಾವು, ಸೇರಿನ ಲೆಕ್ಕದಲ್ಲಿಯೆ. ಹೊಸ ತಲೆಮಾರಿನವರು ತಕ್ಕಡಿಯಲ್ಲಿ ಧಾನ್ಯ, ಕೆಲವು ತರಕಾರಿಗಳನ್ನು ತೂಗಿ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಇಳಿವಯಸ್ಸಿನವರು, ವೃದ್ಧರು ಸೇರು, ಪಾವಿನ ಲೆಕ್ಕಕ್ಕೆ ಅಂಟಿಕೊಂಡಿದ್ದಾರೆ. ಅವರಿಗೆ ಇನ್ನೂ ಈ ನಾಟಿ ಅಳತೆಯೇ ವ್ಯವಹಾರಿಕ ಮಾಪಕ.

ವ್ಯವಹಾರ, ವಸ್ತು ವಿನಿಮಯದಲ್ಲಿ ಅಳತೆ ಅಥವಾ ಮಾಪಕ ಪ್ರಧಾನ. ಘನ ವಸ್ತುಗಳು ಕೆ. ಜಿ. ಲೆಕ್ಕದಲ್ಲಿ ದ್ರವ ಪದಾರ್ಥಗಳನ್ನು ಲೀಟರ್ ಅಳತೆಯಲ್ಲಿ ಇಂದು ವಿನಿಮಯ ಅಥವಾ ವ್ಯವಹಾರ ಮಾಡಲಾಗುತ್ತದೆ. ಇದು ಮೆಟ್ರಿಕ್ ಪದ್ದತಿ. ನಮ್ಮ ಮಾಪಕ ಪದ್ಧತಿ ಬೇರೆಯದೇ ಆಗಿತ್ತು. ಮೆಟ್ರಿಕ್ ಪದ್ಧತಿಯನ್ನು ತೂಕ ಮತ್ತು ಅಳತೆ ಕಾನೂನಿನ ಅಡಿಯಲ್ಲಿ ೧೯೫೮ರಲ್ಲಿ ತರಲಾಗಿದೆ. ೧೯೬೦ರಿಂದ ದೇಶದಾದ್ಯಂತ ಏಕರೂಪದ ಮಾಪಕ ಪದ್ಧತಿ ಜಾರಿಯಾಗಿದೆ. ಹಾಗಾದರೆ ಅದಕ್ಕೂ ಮೊದಲು ನಮ್ಮಲ್ಲಿ ಹೇಗೆ ವಸ್ತು ವಿನಿಮಯ ನಡೆಯುತ್ತಿತ್ತು?
ಕೃಷಿ ಉತ್ಪಾದನೆ, ಬಳಕೆಯ ವಸ್ತುವನ್ನಾಧರಿಸಿ ವಿವಿಧ ಮಾಪಕ ಪದ್ಧತಿ ನಮ್ಮಲ್ಲಿ ಚಾಲ್ತಿಯಲ್ಲಿತ್ತು. ಅದು ದೇಸೀಯ ಮಾಪಕ ಕ್ರಮ. ಇಂದು ಅದು ಪಾರಂಪರಿಕ ಕ್ರಮ. ಈ ಅಳತೆಯೊಂದಿಗೆ ಜನ ಜೀವನದ ವಿವಿಧ ಸಂಬಂಧ, ರೂಢಿ, ಸಂಪ್ರದಾಯವೂ ಥಳಕು ಹಾಕಿಕೊಂಡಿತ್ತು. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ತೋರುವ ಈ ಮಾಪಕ ಕ್ರಮ ಇಂದು ನಮ್ಮಿಂದ ದೂರವಾಗಿದೆ.
ಪಾರಂಪರಿಕ ಅಳತೆ ಸಾಧನಗಳಲ್ಲಿ ಸಿದ್ದೆ, ಪಾಯಲಿ, ಪಾವು, ಕೊಳಗದ ವಿಧಾನವೂ ಒಂದು. ಈ ಅಳತೆ ಪ್ರಮಾಣ ಎಲ್ಲ ಪ್ರದೇಶಗಳಲ್ಲಿಯೂ ಒಂದೇ ತರವಾಗಿರಲಿಲ್ಲ. ಉತ್ತರ ಕನ್ನಡದಲ್ಲಿ ಒಂದು ವಿಧಾನ ಇದ್ದರೆ ದಕ್ಷಿಣ ಕನ್ನಡದ ಮಾಪಕ ಕ್ರಮವೇ ಬೇರೆ. ಉತ್ತರ ಕರ್ನಾಟಕದಲ್ಲಿದ್ದ ಅಳತೆ ವಿಧಾನವೇ ಇನ್ನೊಂದು. ಮೊಹೆಂಜೋದಾರೋ ನಾಗರಿಕತೆಯ ಕಾಲದಲ್ಲಿ ಒಂಬತ್ತು ಭಾಗಗಳ ಚಿಪ್ಪಿನ ಅಳತೆಗೋಲು, ಮತ್ತು ಹರಪ್ಪ ನಾಗರಿಕತೆಯ ಕಾಲದಲ್ಲಿ ತೂಕದ ಬೊಟ್ಟುಗಳು ಬಳಕೆಯಲ್ಲಿದ್ದವು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ನಾಗರಿಕತೆಯೊಂದಿಗೆ ಅಳತೆಯ ಸಾಧನ, ವಿಧಾನಗಳೂ ಸುಧಾರಣೆಯೊಂದಿಗೆ ವಿಕಾಸವಾಯಿತು. ಈ ಮಾಪಕ ಪದ್ಧತಿ ಪ್ರಾದೇಶಿಕ ಭಿನ್ನತೆ, ವೈವಿಧ್ಯತೆಯನ್ನೂ ಪ್ರತಿಬಿಂಬಿಸುತ್ತದೆ. ವಿಜಯ ನಗರ ಅರಸರ ಕಾಲದಲ್ಲಿ ಬೀದಿ ಬದಿಗಳಲ್ಲಿ ವಜ್ರ ವೈಡೂರ್‍ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರೆಂಬ ಚರಿತ್ರೆಯ ಮಾತು ನಮ್ಮ ಅಂದಿನ ಮಾಪಕ ಪದ್ಧತಿಯನ್ನು ಪ್ರತಿನಿಧಿಸುತ್ತದೆ.
ಸಿದ್ದೆ: ಕಟ್ಟಿಗೆಯಿಂದ ತಯಾರಿಸಿದ ಒಂದು ಚಿಕ್ಕ ಅಳತೆಯ ಸಾಧನ. ಸಿದ್ದೆ- ಕೊಳಗ ಮಾಪಕದಲ್ಲಿ ಸಿದ್ದೆ ಚಿಕ್ಕ ಅಳತೆಯ ಮಾಪಕ. ಬಿದಿರಿನಿಂದ ತಯಾರಿಸಿದ ಸಿದ್ದೆಯ ಬಳಕೆಯೂ ಇತ್ತು. ‘ಸಿದ್ದೆ ಅಕ್ಕಿ ಕೊಡಮ್ಮಾ’ ಎಂದು ಭಿಕ್ಷುಕರು ಹೇಳುವುದನ್ನು ಕೇಳಿರಬಹುದು. ಸಾಮಾನ್ಯವಾಗಿ ಸಿದ್ದೆಯಲ್ಲಿ ಅಕ್ಕಿ, ಕಾಳುಕಡಿಯನ್ನು ಅಳೆಯುತ್ತಿದ್ದರು. ಒಂದು ಸಿದ್ದೆ ಅಕ್ಕಿ ಈರ್ವರ ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ. ಮಲೆನಾಡಿನಲ್ಲಿ ಊಟಕ್ಕೆ ಅನ್ನ ಮಾಡಲು ಬೇಕಾದ ಅಕ್ಕಿಯನ್ನು ಸಿದ್ದೆಯಲ್ಲಿ ಅಳೆದು ಹಾಕುವ ಪದ್ಧತಿ ರೂಢಿಯಲ್ಲಿತ್ತು.
ನಾಲ್ಕು ಸಿದ್ದೆಗೆ ಪಾವು: ಸಿದ್ದೆಯ ನಂತರದ ಅಳತೆ ಪಾವು. ನಾಲ್ಕು ಸಿದ್ದೆಗೆ ಒಂದು ಪಾವು. ತಾಮ್ರ, ಹಿತ್ತಾಳೆಯಿಂದ ಪಾವಿನ ಅಳತೆ ಮಾಪಕವನ್ನು ಮಾಡುತ್ತಾರೆ.
ಸಿದ್ದೆಯ ನಂತರದ ಮಾಪಕ ಪಾಯಲಿ. ಒಂದು ಪಾಯಲಿ ಎಂದರೆ ೪ ಪಾವು.
ಸಿದ್ದೆ, ಪಾವು, ಪಾಯಲಿ ಇವು ಒಂದು ರೀತಿಯಲ್ಲಿ ಚಿಲ್ಲರೆ ಲೆಕ್ಕ. ಈ ಮಾಪಕಗಳನ್ನು ಬೇಳೆ ಕಾಳು, ಧಾನ್ಯಗಳನ್ನು ಅಳೆಯಲು ಬಳಸುತ್ತಿದ್ದರು. ಕೊಡಕೊಳ್ಳುವ ವ್ಯವಹಾರದಲ್ಲಿ ಇವುಗಳೇ ಅಳತೆಯ ಸಾಧನಗಳು. ಹೆಚ್ಚಿನ ಪ್ರಮಾಣದಲ್ಲಿರುವ ವಸ್ತುಗಳನ್ನು ಅಳೆಯಲು, ವಿನಿಮಯ ಮಾಡಿಕೊಳ್ಳಲು ಕೊಳಗದ ಬಳಕೆಯಾಗುತ್ತಿತ್ತು. ಆದರೆ ಕೊಳಗದ ಅಳತೆಯಲ್ಲೂ ಪ್ರಾದೇಶಿಕ ವ್ಯತ್ಯಾಸ ಕಂಡು ಬರುತ್ತದೆ. ಉತ್ತರ ಕರ್ನಾಟಕ ಕೆಲವು ಭಾಗದಲ್ಲಿ ಕೊಳಗದ ಅಳತೆ ಬದಲಿಗೆ ಬಳ್ಳದ ಪದ್ಧತಿ ಇತ್ತು. ಅಲ್ಲಿಯ ಅಳತೆ ಕ್ರಮ ಬೇರೆಯದೇ ಆಗಿತ್ತು. ಅದು ಹೀಗಿತ್ತು. ೨ನವಟಾಕು- ೧ಚಟಾಕು(ಪಾವು), ೨ ಚಟಾಕು- ೧ ಸೇರು, ೨ ಸೇರು- ಕಾಲು ಪಾವು, ೨ ಪಡಿ- ೧ಗಿದ್ನ ಹೀಗೆ ಸುಮಾರು ೯ ವಿಭಾಗದಲ್ಲಿ ಕೃಷಿ ಉತ್ಪನ್ನಗಳನ್ನು ಅಳೆಯುವ ಕ್ರಮ ಬಳಕೆಯಲ್ಲಿತ್ತು.
ಹೈದ್ರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ, ಹೈದ್ರಾಬಾದ್ ಗುಲ್ಬರ್ಗಾ ಪ್ರದೇಶದಲ್ಲಿ ಕಚೇರಿ ಅಳತೆ, ಬಝಾರ್ ಅಳತೆಯೆಂದು ಪ್ರತ್ಯೇಕ ಅಳತೆಯಿದ್ದ ಬಗ್ಗೆ ಮಾಹಿತಿಗಳು ದೊರೆಯುತ್ತದೆ. ಇಲ್ಲಿ ಸಿಕ್ಕ, ಕಂಚಾಸ್, ಪುಂಕಾಸ್, ರತೀಸ್, ಮಾಶಾಸ್ ಇನ್ನಿತರ ಮಾಪಕ ಕ್ರಮ ಬಳಕೆಯಲ್ಲಿತ್ತು.
೧೯೭೦ರಲ್ಲಿ ಮೈಸೂರು ರಾಜ್ಯ ಸರ್ಕಾರ ಪ್ರಕಟಿಸಿದ ಕರ್ನಾಟಕ ಪರಂಪರೆ ಪುಸ್ತಕದಲ್ಲಿ ಈ ಪದ್ಧತಿಯ ಕೆಲವು ಮಾಹಿತಿಗಳು ಲಭ್ಯ. ಅಲ್ಲಿರುವಂತೆ: ಬಾದಾಮಿ ಚಾಲುಕ್ಯರ ಕಾಲದಲ್ಲಿ ದೊರೆತ ಕ್ರಿ. ಶ. ೭೩೨-೩ರ ಶಾಸನದಲ್ಲಿ ಮಣ, ಸೇರು, ವೀಶ, ಭಾಂಡಪೇರು ಬಗ್ಗೆ ಉಲ್ಲೇಖವಿದೆ. ಇವುಗಳಲ್ಲಿ ಮಣ ೧೧. ೨ ಕೆ. ಜಿ., ಪೇರು ಎಂಬುದು ೬೪ ಸೇರಿನ ಒಂದು ಕಾಳಿನ ಮೂಟೆಗೆ ಸಮ, ಮೀಸ, ಮೀಶ ಎಂಬುದು ದಕ್ಷಿಣ ಕರ್ನಾಟದಲ್ಲಿ ಪ್ರಚಲಿತವಿತ್ತು. ಭಾಂಡಪೇರು ಎಂಬುದು ಒಂದು ಭಂಡಿಯ ಭಾರದಳತೆ. ಕರ್ನಾಟಕ ಸರ್ಕಾರ ಪ್ರಕಟಿಸಿದ ಕರ್ನಾಟಕ ಪರಂಪರೆ ಪುಸ್ತಕದಲ್ಲಿ ೭೫ ಸೇರು ಭತ್ತದ ಬೆಲೆ ೧೯೩೦ರಲ್ಲಿ ೧ ರುಪಾಯಿ ಇತ್ತು. ೧೯೬೦ರಲ್ಲಿ ಒಂದು ರುಪಾಯಿಗೆ ೧೦. ೫ ಸೇರು ಭತ್ತ ಬರುತ್ತಿತ್ತು ಎಂದು ನಮೂದಿಸಲಾಗಿದೆ.
ಈ ಪಾರಂಪರಿಕ ಅಳತೆ ಸಾಧನಗಳು ಜನರ ಜೀವನದಲ್ಲಿ ಬಳಕೆಯಲ್ಲಿದ್ದ ಬಗೆ ವಿಶಿಷ್ಟ. ಕೃಷಿಕರ ಮನೆಯಲ್ಲಿ ಕೂಲಿ ಮಾಡಿದರೆ ಅವನಿಗೆ ಎರಡುವರೆ ಪಾಯಲಿ ಅಕ್ಕಿಯನ್ನು, ೫ರಿಂದ ೧೦ ರುಪಾಯಿಯನ್ನು ಕೂಲಿಯಾಗಿ ಕೊಡಲಾಗುತ್ತಿತ್ತು. ಇದಕ್ಕೆ ‘ಬಳಿ’ಕೊಡುವ ಪದ್ಧತಿ ಎಂದು ಕರೆಯುತ್ತಾರೆ. ಶಿರಸಿ ತಾಲೂಕಿನ ಸೋಂದಾ ಪ್ರದೇಶದಲ್ಲಿ ಇತ್ತೀಚಿನ ವರೆಗೂ ಚಾಲ್ತಿಯಲ್ಲಿದ್ದ ಪದ್ದತಿ ಇದು. ಗದ್ದೆಗೆ ಬಿತ್ತಲು ಬೇಕಾದ ಭತ್ತವನ್ನು(ಬೀಜ) ಕೊಳಗದ ಅಳತೆಯಲ್ಲಿಯೇ ನಿರ್ಧರಿಸಲಾಗುತ್ತಿತ್ತು. ೨೦ ಕೊಳಗ ಭತ್ತ ಒಂದು ಖಂಡಗ ಭೂಮಿ ಬಿತ್ತನೆಗೆ ಬರುತ್ತದೆ ಎಂಬುದು ಹಿರಿಯರ ಲೆಕ್ಕ. ಒಂದು ಖಂಡಗ ಭೂಮಿ ಎಂದರೆ ೧.೨೫ ಎಕರೆ ಭೂಮಿ ಎಂದು ಆಧುನಿಕ ಲೆಕ್ಕ. ಕರೆವಕ್ಕಲ ಜನಾಂಗದ ಮದುವೆಯ ಶಾಸ್ತ್ರದಲ್ಲಿ ಕೆಂಪು(ಕುಂಕುಮ)ನೀರಿನಲ್ಲಿ ಬಂಗಾರದ ಉಂಗುರವನ್ನು ಹಾಕುತ್ತಾರೆ. ಅದನ್ನು ವರ ಹುಡುಕಿ ತೆಗೆಯುವ ಪದ್ಧತಿ ರೂಢಿಯಲ್ಲಿದೆ. ಆವಾಗ ‘ವಜ್ರ ಕಂಡ್ಯೋ, ವೈಡೂರ್‍ಯ ಕಂಡ್ಯೋ, ೧೨ ಖಂಡುಗ ಹೊಲ ಕಂಡ್ಯೋ’ ಎಂದು ವರನಲ್ಲಿ ಕೇಳಲಾಗುತ್ತದೆ. ೧೨ ಖಂಡುಗ ಹೊಲವನ್ನು ಇಲ್ಲಿ ಪರೋಕ್ಷವಾಗಿ ವಜ್ರ ವೈಡೂರ್‍ಯಕ್ಕೆ ಹೋಲಿಸಿರುವುದನ್ನು ಗಮನಿಸಬಹುದು. ಬುಡಕಟ್ಟು ಜನಾಂಗದ ಹಾಲಕ್ಕಿ ಜನಾಂಗದಲ್ಲಿ ತಿರುಪತಿ ಯಾತ್ರೆಗೆ ಹೋದವರು ಅಲ್ಲಿಂದ ಕೊಳಗವನ್ನು ತರುವ ಪದ್ಧತಿಯಿದೆ. ಚಂದನದ ಕಟ್ಟಿಗೆಯನ್ನು ಮಾಡಿದ ಈ ಕೊಳಗ ಒಡೆದರೆ ಅದನ್ನು ತೇಯ್ದು ದೇವರ ಪೂಜೆಗೆ ಬಳಸುತ್ತಾರೆ. ಸಂಪ್ರದಾಯದಂತೆ ಕೊಳಗವನ್ನು ಸುಡುವುದಾಗಲಿ, ಎಸೆಯುವುದಾಗಲೀ ಮಾಡುವುದಿಲ್ಲ. ಬುಡಕಟ್ಟು ಜನಾಂಗದವರು ಆಚರಿಸುವ ಸುಗ್ಗಿ ಹಬ್ಬ, ಆರ್ದೆ ಮಳೆಹಬ್ಬ, ಹೊಸಕ್ಕಿ ಹಬ್ಬ ಮತ್ತು ದೀಪಾವಳಿ ಹಬ್ಬದಲ್ಲಿ ಸಿದ್ದೆ ಕೊಳಗಗಳನ್ನು ತೊಳೆದು ಪೂಜೆ ಸಲ್ಲಿಸುತ್ತಾರೆ. ಹಲಸು ಮತ್ತಿತರ ಗಟ್ಟಿ ಇರುವ ಮರಗಳಿಂದ ಕೊಳಗ ತಯಾರಿಸುತ್ತಾರೆ. ಕೊಳಗದ ಬಾಯಿ(ತುದಿ) ಒಡೆಯದಂತೆ ತುದಿಯಲ್ಲಿ ಕಬ್ಬಿಣದ ಪಟ್ಟಿಯನ್ನು ಹಾಕುವ ಪದ್ಧತಿಯೂ ಇತ್ತು.
ಸಿದ್ದೆಯ ಅಳತೆ ಕ್ರಮದಲ್ಲಿ ದೊಡ್ಡ ಅಳತೆ ಖಂಡಗ. ಪೂರ್ತಿ ೨೦ ಕೊಳಗಕ್ಕೆ ಒಂದು ಖಂಡಗ. ಇಲ್ಲಿ ಗಮನಿಸಬೇಕಾದ ಸಂಗತಿ, ಭೂಮಿಯನ್ನು ಖಂಡಗದ ಲೆಕ್ಕದಲ್ಲಿ ಅಳೆಯುವುದು ಬೇರೆ, ಭತ್ತವನ್ನು ಖಂಡಗದಲ್ಲಿ ಅಳೆಯುವ ಪದ್ಧತಿ ಬೇರೆ. ಭತ್ತ ಅಳೆಯುವ ಖಂಡಗಕ್ಕೆ ಪ್ರತ್ಯೇಕ ಸಾಧನವಿರಲಿಲ್ಲ. ೨೦ ಕೊಳಗ ಭತ್ತವನ್ನು ಅಳೆದರೆ ಅದನ್ನೇ ಒಂದು ಖಂಡಗ ಎಂದು ಹೇಳುವ ರೂಢಿಯಿತ್ತು. ವಲ್ಲೊ ಎಂಬ ಇನ್ನೊಂದು ವಿಧದ ಮಾಪಕವೂ ಬಳಕೆಯಲ್ಲಿತ್ತು. ಇದು ಕರಾವಳಿ ಮತ್ತು ಕೊಂಕಣಿ ಸಮುದಾಯದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ವಲ್ಲೋ ಬಿದಿರು, ಬೆತ್ತದಿಂದ ತಯಾರಿಸಿದ ಒಂದು ಅಳೆತೆಯ ಸಾಧನ. ಒಂದು ವಲ್ಲೋ ಎಂದರೆ ಐದು ಪಾಯಲಿ. ಅಕ್ಕಿ ಅಳೆಯಲು ಇದರ ಬಳಕೆ.
ದಣಿದ ಎತ್ತಿಗೆ ಮಣವೇ ಭಾರ, ಮಣಾ ತೂಗದ ತ್ರಾಸು ಖಂಡಿ ತೂಗೀತೇ, ಸೇರು ಹೊರದ ತ್ರಾಸು ಭಾರ ಹೋತ್ತೀತೇ, ಕಂಡುಗವನ್ನು ಬಳ್ಳದಲ್ಲಿ ಅಳೆದಂತೆ ಇವು ಪಾರಂಪರಿಕ ಅಳತೆಯನ್ನು ಹೇಳುವ ಗಾದೆಮಾತುಗಳು.
ಬದಲಾದ ಕಾಲದಲ್ಲಿ ಅಳತೆಯ ಕ್ರಮವೂ ಬದಲಾಗಿದೆ. ಏಕ ರೂಪದ ಮಾರುಕಟ್ಟೆ ವ್ಯವಸ್ಥೆಗಾಗಿ ಮೆಟ್ರಿಕ್ ಪದ್ಧತಿ ಬಂದಿದೆ. ದೇಶ ವಿದೇಶವೂ ಸೇರಿದಂತೆ ಎಲ್ಲಡೆ ಕೆ. ಜಿ. ಅಥವಾ ಲೀಟರ್ ಎಂದರೆ ಒಂದೇ ಪ್ರಮಾಣದ ಅಳತೆಯಾಗಿದೆ. ಒಳಿತು ಕೆಡಕು ಎನ್ನುವ ಅಭಿಪ್ರಾಯಕ್ಕಿಂತ ಜಾಗತೀಕರಣ, ವ್ಯಾಪಾರೀಕರಣದಲ್ಲಿ ಪಾರಂಪರಿಕ, ದೇಸೀಯ ಜ್ಞಾನಕ್ಕೆ ಬೆಲೆಯಿಲ್ಲ.

ತನು, ಮನದ ಆರೋಗ್ಯಕ್ಕೆ ತೃಣ ಧಾನ್ಯಗಳು



ಬದಲಾವಣೆ ಗಾಳಿ ನಮ್ಮ ಜೀವನ ಮತ್ತು ಆಹಾರ ಕ್ರಮದಲ್ಲೂ ಗಣನೀಯ ಪ್ರಮಾಣದಲ್ಲಿದೆ. ಸ್ಥಳೀಯ ಮತ್ತು ಕಾಲ ಮಾನಕ್ಕೆ ದೊರೆಯುವ ಆಹಾರವನ್ನು ನಾನಿಂದು ಮರೆತೇ ಬಿಟ್ಟಿದ್ದೇವೆ. ಅಕ್ಕಿ, ಗೋಧಿ ಬಿಟ್ಟರೆ ಅಂಗಡಿ, ಹೊಟೇಲ್ ತಿನಿಸುಗಳೇ ನಮಗೆ ಶ್ರೇಷ್ಠ. ಪರಿಣಾಮ ರಕ್ತದೊತ್ತಡ, ಸಿಹಿಮೂತ್ರ, ಮಾನಸಿಕ ಖಾಯಿಲೆ ಹೀಗೆ ಹತ್ತಾರು ರೋಗಗಳಿಗೆ ಅಂಟಿಕೊಂಡಿದ್ದೇವೆ. ಪೌಷ್ಠಿಕ ಜೊತೆಗೆ ಸಮತೋಲನ ಆಹಾರವಾದ ತೃಣ ಧಾನ್ಯಗಳ ಆಹಾರ ಇಂದು ನಮಗೆಲ್ಲಿಗೊತ್ತಿದೆ?
ಕಿರು ಧಾನ್ಯಗಳ ಆಹಾರ ಸಿಹಿಮೂತ್ರ ರೋಗಿಗಳಿಗೆ ಉತ್ತಮ ಆಹಾರ ಎಂಬುದು ಸರ್ವ ವಿಧಿತ. ರಾಗಿ, ಸಾವೆ, ಬರಗು, ನವಣೆ, ಆರ್ಕ, ಊದಲು ಇವನ್ನು ಕಿರು ಧಾನ್ಯ ಅಥವಾ ತೃಣ ಧಾನ್ಯ ಎಂದು ಕರೆಯುತ್ತಾರೆ. ಚಿಕ್ಕ ಕಾಳಿನ ಈ ಧಾನ್ಯಗಳು ಆರೋಗ್ಯದ ದೃಷ್ಟಿಯಿಂದ ಬಹು ದೊಡ್ಡ ಗುಣದ್ದು. ಅಕ್ಕಿ, ಜೋಳ, ಗೋಧಿಗಿಂತ ಕಿರು ಧಾನ್ಯಗಳಲ್ಲಿ ಸಸಾರಜನಕ, ಕೊಬ್ಬಿನಾಂಶ, ಖನಿಜ, ಲವಣ ಮತ್ತು ನಾರಿನಾಂಶದ ಪ್ರಮಾಣ ಹೆಚ್ಚಿದೆ. ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ(ಶೇ.೭ರಿಂದ ೧೨)ಹೊಂದಿರುವ ಕಿರುಧಾನ್ಯಗಳನ್ನು ಇತರ ಬೇಳೆ ಕಾಳುಗಳೊಂದಿಗೆ ಬಳಸುವುದರ ಮೂಲಕ ಸಮತೋಲನ ಆಹಾರ ಸೇವನೆಯೂ ಆಗುತ್ತದೆ.
ಸುಣ್ಣದ ಅಂಶ ರಾಗಿಯಲ್ಲಿ ಹೆಚ್ಚು ಪ್ರಮಾಣಗಲ್ಲಿದೆ. ರಾಗಿ ಸೇವನೆ ಹಲ್ಲುಗಳ ಬೆಳವಣಿಗೆಗೆ ಮತ್ತು ನಿರ್ವಹಣೆಗೆ ಉಪಯುಕ್ತ. ರಾಗಿ ಮಾಲ್ಟ್ ಬೆಳೆಯುವ ಮಕ್ಕಳಿಗೆ ಉತ್ತಮ ಆಹಾರ ಕೂಡಾ. ಇಂದು ಶಿಶು ಆಹಾರ ತಯಾರಿಕೆಯಲ್ಲಿ ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಸಾವೆ ಮತ್ತು ಊದಲಿನಲ್ಲಿ ಸತುವಿನ ಪ್ರಮಾಣ ಹೆಚ್ಚಿಗೆ ಇದೆ. ಕಿರು ಧಾನ್ಯಗಳನ್ನು ಆರೋಗ್ಯದ ಹಿತ ದೃಷ್ಟಿಯಿಂದ ನಿತ್ಯದ ಆಹಾರದ ಒಂದು ಭಾಗವಾಗಿ ಸೇವಿಸುವಂತೆ ಶಿಫಾರಸು ಮಾಡಲಾಗುತ್ತಿದೆ. ಗಮನಾರ್ಹ ಎಂದರೆ ಅಕ್ಕಿಯ ಬಳಕೆಯಂತೆ ಬಹುತೇಕ ಕಿರುಧಾನ್ಯಗಳನ್ನು ಬಳಸಿ ಎಲ್ಲ ಖಾದ್ಯಗಳನ್ನೂ ತಯಾರಿಸಬಹುದು.
ಪಿಷ್ಟ, ನಿಧಾನವಾಗಿ ಜೀರ್ಣವಾಗುವ, ಹೀರಲ್ಪಡುವ ಮತ್ತು ಹಂತಹಂತವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುವ ವಿಶಿಷ್ಟಗುಣ ಕಿರುಧಾನ್ಯದ್ದು. ಆದ್ದರಿಂದಲೇ ಇದು ಸಕ್ಕರೆ ಖಾಯಿಲೆ ರೋಗಿಗಳಿಗೆ ಹೆಚ್ಚು ಉಪಯುಕ್ತ ಆಹಾರ. ಕಿರುಧಾನ್ಯಗಳಲ್ಲಿ ಶೇ.೧೦-೧೫ರಷ್ಟಿರುವ ನಾರಿನಾಂಶ ಸಣ್ಣ ಕರುಳಿನ ಕ್ರಿಯೆಗೆ ಸಹಕರಿಸುತ್ತದೆ. ಮಲ ವಿಸರ್ಜನೆಗೆ ಕಿರು ಧಾನ್ಯಗಳ ಆಹಾರ ಪೂರಕ. ಅಲ್ಲದೆ ಮೂಲಾವ್ಯಾಧಿ ಬರದಂತೆ ತಡೆಯುತ್ತದೆ. ಐಸೋಫ್ಲೇವೋನ್, ಲಿಗ್ನಾನ್‌ಗಳಂತಹ ಸಸ್ಯಜನ್ಯ ಚೋದಕಗಳು ದೈಹಿಕ ಮತ್ತು ಮಾನಸಿಕ ತೊಂದರೆ ವಿರುದ್ಧ ರಕ್ಷಣೆ ನೀಡುತ್ತದೆ. ಕಿರುಧಾನ್ಯಗಳಲ್ಲಿರುವ ಸಂರಕ್ಷಕ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಸೋಂಕು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
ಕಿರುಧಾನ್ಯಗಳಲ್ಲಿರುವ ಕಾಬ್ರೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುತ್ತದೆ. ಇದರಲ್ಲಿರುವ ಸೂಕ್ಷ್ಮ ಪೋಷಕ ಧಾತುಗಳು ರೋಗ ನಿರೋಧಕ ಶಕ್ತಿ ಮತ್ತು ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶ ಕೊಡುತ್ತದೆ. ಭತ್ತವನ್ನು ಪಾಲಿಶ್ ಮಾಡಿ ಅಕ್ಕಿ ಮಾಡುತ್ತಾರೆ. ಆವಾಗ ಪೌಷ್ಠಿಕಾಂಶಗಳೆಲ್ಲ ಹೋಗಿ ಕೇವಲ ಪಿಷ್ಠ ಮಾತ್ರ ಇರುತ್ತದೆ. ಮಿಲೆಟ್‌ನಲ್ಲಿ ಎಲ್ಲ ಪೋಷಕಾಂಶಗಳು ಇದೆ. ನವಣೆ ಗಂಜಿ ಜ್ವರ ಬಂದವರಿಗೆ ಉತ್ತಮ. ಸಜ್ಜೆಯಲ್ಲಿ ಹೆಚ್ಚು ಪ್ರೆಟೀನ್ ಇದೆ. ಕಿರುಧಾನ್ಯಗಳಿಂದ ರವೆ ಮಾಡಬಹುದು. ಭತ್ತದ ಅಕ್ಕಿಯಿಂದ ಮಾಡುವ ಎಲ್ಲ ಆಹಾರವನ್ನು ಕಿರುಧಾನ್ಯದಿಂದ ಮಾಡಲು ಸಾಧ್ಯ ಎನ್ನುತ್ತಾರೆ ಕಿರುಧಾನ್ಯಗಳ ಕುರಿತು ಕೆಲಸ ಮಾಡುತ್ತಿರುವ ತಿಂಬತ್ತುವಿನ ದಿನೇಶ್.
ನವಣೆ : ಹೃದಯರೋಗ, ಕ್ಯಾನ್ಸರ್, ಮೂಲಾವ್ಯಾದಿ, ಮಲಬದ್ಧತೆ, ಮೊದಲಾದ ರೋಗಗಳ ವಿರುದ್ಧ ನವಣೆಯ ಆಹಾರ ರಕ್ಷಣೆ ನೀಡುತ್ತದೆ. ನವಣೆಯಿಂದ, ಅನ್ನ, ಗಂಜಿ, ಮುದ್ದೆ, ರೊಟ್ಟಿ, ತಾಲಿಪಟ್ಟು, ಪಡ್ಡು, ಇಡ್ಲಿ, ದೋಸೆ ತಯಾರಿಸಿ ತಿನ್ನಬಹುದು.
ಸಾವೆ:ಸಿಹಿ ಮೂತ್ರ ರೋಗಿಗಳಿಗೆ ಇದೊಂದು ಉತ್ತಮ ಆಹಾರ ಎಂದು ಪರೀಕ್ಷೆಗಳಿಂದ ದೃಢವಾಗಿದೆ. ಕಡಿಮೆ ಸಕ್ಕರೆ ಪ್ರಮಾಣ, ಕ್ರಮೇಣ ಜೀರ್ಣವಾಗುವ ಕಾರ್ಬೋಹೈಡ್ರೇಟ್ಸ್, ಹೆಚ್ಚಿನ ಪ್ರಮಾಣದ ಕೊಬ್ಬು, ಪಿಷ್ಠ ಮತ್ತು ಲವಣ ಸಾವೆಯಲ್ಲಿದೆ. ಈ ಕಾಳಿನಲ್ಲಿ ನಾರಿನಂಶ ಹೆಚ್ಚು. ಕ್ಯಾಲ್ಶಿಯಂ ಮತ್ತು ರಂಜಕ ಪ್ರಮಾಣವೂ ಸಾಕಷ್ಟಿದೆ. ಅನ್ನ, ರೊಟ್ಟಿ, ಪಾಯಸ, ಚಕ್ಕುಲಿ, ವಡಾ, ಇಡ್ಲಿ, ಹಪ್ಪಳ, ಸಂಡಿಗೆ, ಪಡ್ಡು ಮೊದಲಾದ ತಿಂಡಿ ತಿನಿಸುಗಳನ್ನು ಸಾವೆಯಿಂದ ತಯಾರಿಸಬಹುದು.
ಬರಗು:ಇದರಿಂದಲೂ ಅನ್ನ, ರೊಟ್ಟಿ, ಪಾಯಸ, ಚಕ್ಕುಲಿ, ವಡಾ, ಹಪ್ಪಳ, ಸಂಡಿಗೆ, ಇಡ್ಲಿ, ವಡಾ ಮಾಡಬಹುದು.
ಊದಲುಊದಲಿನಲ್ಲಿ ಅಕ್ಕಿ, ಗೋಧಿಗಿಂತ ಹೆಚ್ಚು (ಶೇ.೧೧)ಸಾರಜನಕವಿದೆ. ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶವಿದೆ. ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಹೃದಯ ಖಾಯಿಲೆ ತಡೆಯುತ್ತದೆ. ಅಕ್ಕಿಯಿಂದ ತಯಾರಿಸುವ ಎಲ್ಲ ಆಹಾರ ಪದಾರ್ಥವನ್ನು ಊದಲಿನಿಂದ ತಯಾರಿಸಲು ಸಾಧ್ಯ. ತಯಾರಿಕೆ ವಿಧಾನವೂ ಹೆಚ್ಚು ಕಡಿಮೆ ಒಂದೇ.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ, ರಾಣಿಬೆನ್ನೂರಿನ ಹನುಮನಹಟ್ಟಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಿರು ಧಾನ್ಯಗಳ ಬಗ್ಗೆ ಹಲವು ಸಂಶೋಧನಾತ್ಮಕ ಕಾರ್‍ಯಗಳು ನಡೆದಿದೆ. ತಳಿ ಅಭಿವೃದ್ಧಿ, ಕಿರು ಧಾನ್ಯಗಳ ವಿವಿಧ ಸಂಸ್ಕರಿತ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಕೈಗೊಂಡ ಪ್ರಯೋಗಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ. ಸಾವೆ, ಬರಗು, ಊದಲು, ನವಣೆ, ರಾಗಿಯಿಂದ ಸುಮಾರು ೩೦ಕ್ಕೂ ಹೆಚ್ಚು ತಿನಿಸುಗಳನ್ನು ತಯಾರಿಸಲಾಗಿದೆ. ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯದ ಆಹಾರ ಮತ್ತು ಪೋಷಣೆ ವಿಭಾಗದಲ್ಲಿ ನವಣೆಯಿಂದ ತಯಾರಿಸಿದ ‘ಡಯಾಬಿಟಿಕ್ಸ್ ಮಿಕ್ಸ್’ ತಯಾರಿಸಲಾಗಿದ್ದು, ಇದು ಸಕ್ಕರೆ ಕಾಯಿಲೆ ಪೀಡಿತರಿಗೆ ಉತ್ತಮ ಪರ್‍ಯಾಯ ಆಹಾರ ಎಂದು ಪರೀಕ್ಷೆಯಲ್ಲಿ ದೃಢವಾಗಿದೆ. ಈ ಎಲ್ಲ ದೃಷ್ಟಿಯಲ್ಲೂ ಕಿರು ಧಾನ್ಯಗಳು ಉತ್ತಮ ಆಹಾರ. ರಾಗಿಯ ಬಿಸ್ಕೇಟ್, ಮಾಲ್ಟ್ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಬೇಬಿ ಫುಡ್‌ಗಳಲ್ಲಿ ರಾಗಿ ಬಳಕೆ ಇದೆ. ನವಣೆ ಚಕ್ಕುಲಿಯೂ ಕೆಲ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ನವಣೆಯಿಂದ ಪಾಪ್‌ಕ್ರಾನ್ ಮಾಡುವ ಪ್ರಯತ್ನವೂ ನಡೆದಿದೆ. ಉತ್ತರ ಭಾರದಲ್ಲಿ ನವಣೆ, ಸಾವೆ ಅನ್ನವನ್ನು ಉಪವಾಸದ ಸಮಯದಲ್ಲಿ ಹೆಚ್ಚು ಬಳಸುತ್ತಾರೆ. ಸಾವೆ ಅನ್ನ ಶಕ್ತಿ ಕೊಡುತ್ತದೆ ಮತ್ತು ಉಪವಾಸದ ನಂತರ ಹೊಟ್ಟೆಗೆ ಗಟ್ಟಿ ಆಹಾರ ಬೇಡ ಎಂಬ ಕಾರಣಕ್ಕೂ ಸಾವೆ ಬಳತ್ತಾರೆ. ಆದರೆ ರಾಜ್ಯದಲ್ಲೇ ತೃಣ ಧಾನ್ಯಗಳ ಆಹಾರ ಪದ್ಧತಿ ಕಣ್ಮರೆಯಾಗುತ್ತಿದೆ. ಅಕ್ಕಿ, ಗೋಧಿ ಬಳಕೆ ಹೆಚ್ಚುತ್ತಿದೆ. ನಮ್ಮ ಆರೋಗ್ಯ, ಆಹಾರ ಕ್ರಮದ ಬಗ್ಗೆ ನಾವೇ ಕಾಳಜಿ ವಹಿಸಬೇಕಲ್ಲವೇ?